ನಿಯೋಜಿತ ಸಾಹಿತ್ಯ ಸಮ್ಮೇಳನಾಧ್ಯಕ್ಷ ಗೊ.ರು.ಚ.
ಬೆಂಗಳೂರು, ಡಿ.18- ಸತ್ಯಾನ್ವೇಷಣೆಗಾಗಿ ಬದುಕನ್ನೇ ಮುಡುಪಾಗಿಟ್ಟ ಮಹಾತ್ಮ ಗಾಂಧೀಜಿಯವರ ಕುರಿತು ಹೆಚ್ಚು ತಿಳಿಯಬೇಕಾಗಿರುವ ಸಂದರ್ಭದಲ್ಲಿ ಅನ್ವೇಷಣೆ ಸಾಹಿತ್ಯ ಪತ್ರಿಕೆಯು ಮಹಾತ್ಮ ಗಾಂಧೀಜಿ ಕುರಿತಾಗಿ ವಿಶೇಷ ಸಂಚಿಕೆಯನ್ನು ಹೊರತರುತ್ತಿರುವುದು ಸಂತೋಷದ ಸಂಗತಿ ಎಂದು ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷ ನಾಡೋಜ ಡಾ. ಗೊ.ರು. ಚನ್ನಬಸಪ್ಪ ಹೇಳಿದರು.
ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸಂಜೆ ವಿಶೇಷ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಳೆದ ಮೂರ್ನಾಲ್ಕು ದಶಕಗಳಿಂದ ಅನ್ವೇಷಣೆ ಹೊರ ಬರುತ್ತಿದ್ದು ಮೌಲಿಕ ಲೇಖನ, ವಿಮರ್ಶೆಗಳನ್ನೊಳಗೊಂಡಿದೆ. ಸಾಹಿತ್ಯ ಪತ್ರಿ ಕೆಗಳು ನಿಜವಾದ ಸಾಹಿತ್ಯ ಸಂಸ್ಕೃತಿ ಯನ್ನು ಕಾಪಾಡಬೇಕು ಎಂದು ಈ ಸಂದರ್ಭದಲ್ಲಿ ಕರೆಕೊಟ್ಟರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಅವರು, ಎಲ್ಲೆಲ್ಲೂ ಯುದ್ಧದ ದಾಹ ಹರಡುತ್ತಿರುವಾಗ ಶಾಂತಿ ಅತ್ಯಗತ್ಯವಾಗಿದ್ದು ಜನಪ್ರಿಯ ಮಾಧ್ಯಮಗಳು – ಸಾಹಿತ್ಯಿಕ ಪತ್ರಿಕೆಗಳು ಶಾಂತಿವಾಹಿನಿಗಳಾಗಬೇಕು.
ಅಹಿಂಸೆ, ಸತ್ಯಾಗ್ರಹದ ಸಾಕ್ಷಿಪ್ರಜ್ಞೆ ಗಾಂಧೀಜಿ ಯವರ ಕುರಿತಾಗಿ ಅನ್ವೇಷಣೆ ವಿಶೇಷ ಸಂಚಿಕೆ ತಂದಿರುವುದು ಅಭಿನಂದನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪತ್ರಿಕೆಯ ಸಂಪಾದಕ ಆರ್.ಜಿ. ಹಳ್ಳಿ ನಾಗರಾಜ, ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್. ಪಿನಾಕಪಾಣಿ, ಕವಿ ಗುಂಡೀಗೆರೆ ವಿಶ್ವನಾಥ್, ಶರಣ ಸಾಹಿತ್ಯ ಪರಿಷತ್ತು ಮಾಜಿ ಕಾರ್ಯದರ್ಶಿ ಚಿಕ್ಕರಿಯಪ್ಪ ಉಪಸ್ಥಿತರಿದ್ದರು.