ಪಂಚಮಸಾಲಿ ಶ್ರೀ ವಿರುದ್ಧ ನಿಂದನಾತ್ಮಕ ಹೇಳಿಕೆಗೆ ಖಂಡನೆ: ದೂರು ದಾಖಲು

ದಾವಣಗೆರೆ, ಡಿ. 18-  ಪಂಚಮಸಾಲಿ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿಯವರ ಬಗ್ಗೆ ನಿಂದನಾತ್ಮಕ ಹೇಳಿಕೆ ನೀಡಿದ ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು ಅವರ ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಅಖಿಲ ಭಾರತ ಪಂಚಮಸಾಲಿ ಮಹಾಸಭಾ ಜಿಲ್ಲಾಧ್ಯಕ್ಷ ಅಶೋಕ್ ಗೋಪನಾಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿಗೆ ಸಂಬಂಧಿಸಿದಂತೆ ಡಿ. 10 ರಂದು ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ಸಂದರ್ಭದಲ್ಲಿ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಇದಕ್ಕೆ ಪುಷ್ಠಿ ನೀಡುವಂತೆ ಹಿಂದುಳಿದ ವರ್ಗದ ವೇದಿಕೆ ಅಧ್ಯಕ್ಷ ಶಿವರಾಮು ಅವರು ಡಿ. 14 ರಂದು ಮೈಸೂರಿನಲ್ಲಿ ಸಾರ್ವಜನಿಕವಾಗಿ ಪತ್ರಿಕಾಗೋಷ್ಠಿ ನಡೆಸಿ, ಮೀಸಲಾತಿ ಕಸಿಯಲು ಬಂದರೆ ಜಗದ್ಗುರುಗಳ ಕೈ ಕತ್ತರಿಸುತ್ತೇವೆ ಎಂಬ ಹೇಳಿಕೆ ಮೂಲಕ ವೈಯಕ್ತಿಕ ನಿಂದನೆ ಮಾಡಿದ್ದು, ನ್ಯಾಯಸಮ್ಮತ ಹೋರಾಟವನ್ನು ಪ್ರಶ್ನಿಸಿದ್ದಾರೆ. ಕೂಡಲೇ ಶಿವರಾಮು ಜಗದ್ಗುರುಗಳ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಹೆಚ್.ಎನ್. ಯೋಗೇಶ್, ಅಭಿಕಾಟನ್ ಬಕ್ಕೇಶ್, ಗಿರೀಶ್ ಮರಡಿ, ವಿನಯ ಕುಮಾರ್, ನಾಗರಾಜ್ ಪಾಟೀಲ್, ವಿ. ರಮೇಶ, ಕೊಟ್ರೇಗೌಡ, ಶಂಕರ್, ವೀರೇಶ್, ಬಸವರಾಜ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!