ಮಲೇಬೆನ್ನೂರು, ಡಿ, 17 – ದೇವರಬೆಳಕೆರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಹಾಗೂ ಪುರುಷ ಸಂತಾನ ಹರಣ ಪಾಕ್ಷಿಕ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನವ್ಯ ಅವರು, ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಹೆಚ್ಐವಿ ಏಡ್ಸ್ ಕಾಯಿಲೆ ಹರಡುತ್ತಿದ್ದು, ಸಂಸ್ಕರಿಸದೇ ಬಳಸುವ ಯಾವುದೇ ಸೂಜಿ, ಬ್ಲೇಡ್ಗಳಿಂದ ಜಾಗ್ರತೆ ವಹಿಸಬೇಕು. ರಕ್ತದಾನ ಮಾಡುವಾಗ ಮತ್ತು ರಕ್ತ ಪಡೆಯುವಾಗ ಜಾಗ್ರತೆ ವಹಿಸಬೇಕೆಂದು ತಿಳಿಸಿದರು.
ತಾ. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ. ಉಮ್ಮಣ್ಣ ಮಾತನಾಡಿ, ಪುರುಷ ಸಂತಾನ ಹರಣ ಶಸ್ತ್ರಚಿಕಿತ್ಸೆಯ ಪಾಕ್ಷಿಕ ಕಾರ್ಯಕ್ರಮ ಹಾಗೂ ಕುಟುಂಬ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಯಾವುದೇ ಹೊಲಿಗೆ ಗಾಯ ಇಲ್ಲದ ಚಿಕಿತ್ಸೆ ಈ ಒಂದು ಪುರುಷ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಎಂದು ತಿಳಿಸಿದರು. ರಕ್ತಹೀನತೆ ಹಾಗೂ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವಂತಹ ಸ್ತ್ರೀಯರು ತಮ್ಮ ಗಂಡಂದಿರಿಗೆ ಶಸ್ತ್ರಚಿಕಿತ್ಸೆಯನ್ನು ಮಾಡಿಸುವುದು ಉತ್ತಮ ಎಂದು ಉಮ್ಮಣ್ಣ ತಿಳಿಸಿದರು.
ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಬಿ. ಆದರ್ಶ ಕಾರ್ಯಕ್ರಮ ನಿರೂಪಿಸಿದರು. ಆರೋಗ್ಯ ಕೇಂದ್ರದ ಶ್ರೀಮತಿ ಸಬಿತಮ್ಮ, ಮಹಮದ್ ಇಮ್ರಾನ್, ನಯನ, ರೇಖಾ, ಅಕ್ಷತಾ, ಪೂಜಾ, ಲಕ್ಷ್ಮಿದೇವಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.