ಎವಿಕೆ ಕಾಲೇಜಿನ ನುಡಿ ಹಬ್ಬ ಕಾರ್ಯಕ್ರಮದಲ್ಲಿ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ
ದಾವಣಗೆರೆ, ಡಿ.16- ಕನ್ನಡ ನಾಡು-ನುಡಿ 22ಕ್ಕಿಂತ ಹೆಚ್ಚು ಪ್ರಭುತ್ವಕ್ಕೆ ಒಳಪಟ್ಟಿರುವ ನಾಡು. ಕನ್ನಡ ನೆಲವು ಹಲವು ಪ್ರಭುತ್ವಗಳನ್ನು ಹಂಚಿಕೊಂಡು 1956 ನವೆಂಬರ್ 1 ರಂದು ಹೊಸ ನಾಡಿನ ರೂಪ ಪಡೆಯಿತು. ಈ ನಾಡಿಗಾಗಿ ಅನೇಕ ಜನರು ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ ಹೇಳಿದರು.
ನಗರದ ಎ.ವಿ.ಕೆ ಮಹಿಳಾ ಕಾಲೇಜಿನ ಐಕ್ಯೂಎಸಿ ಅಡಿಯಲ್ಲಿ ಕನ್ನಡ ವಿಭಾಗದ ವತಿಯಿಂದ ನುಡಿ ಹಬ್ಬದ ಮತ್ತು ಅಭಿಮುಖ ಕನ್ನಡ ಸಾಹಿತ್ಯ ವೇದಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ನಾಡು, ನುಡಿಗೆ ಸಾವಿಲ್ಲ. ಆದರೆ, ಆತಂಕಗಳಿವೆ. ಜೊತೆಗೆ ಸಮಸ್ಯೆ ಸವಾಲುಗಳಿವೆ ಅದಕ್ಕೆ ಕನ್ನಡಿಗರಾದ ನಾವುಗಳು ಪರಿಹಾರಗಳನ್ನು ಕಂಡುಕೊಳ್ಳಬೇಕು. ಕ್ರೈನ್ ಕ್ರಾನ್ ಹೇಳುವ ಪ್ರಕಾರ 15-16 ಸಾವಿರ ಭಾಷೆಗಳಿದ್ದವು. ಆದರೆ ಇಂದು 6909 ಪ್ರಚಲಿತದಲ್ಲಿ ಬಳಕೆಯಲ್ಲಿವೆ. ಅದರಲ್ಲಿ ಕನ್ನಡಕ್ಕೆ 29 ನೇ ಸ್ಥಾನ ಇದೆ.
ಇಂದು ಜಾಗತೀಕರಣ, ಖಾಸಗೀಕರಣ, ಉದಾರೀಕರಣ ನೀತಿಯಿಂದ ಕನ್ನಡಕ್ಕೆ ಆತಂಕ ಒದಗಿದೆ. ವಿಶ್ವ ಸಂಸ್ಕೃತಿಯನ್ನು ಒಪ್ಪಿಕೊಂಡಿರುವ ನಾವು ಸ್ಥಳೀಯ ಸಂಸ್ಕೃತಿಯನ್ನು ಮರೆತಿದ್ದೇವೆ. ಅತಿಯಾದ ಅತಿಥಿ ದೇವೋ ಭವ ಎಂಬ ನಮ್ಮ ಕನ್ನಡಿಗರ ಮನಸ್ಸು ಕೂಡ ಇದಕ್ಕೆ ಕಾರಣ ಆಗಿರಬಹುದು. ಜೊತೆಗೆ ಆಧುನೀಕರಣದ ಪ್ರಭಾವದಿಂದಾಗಿ ಕನ್ನಡವು ಒಂದು ಕಡೆಗೆ ಹಿನ್ನೆಲೆಗೆ ಜಾರುವ ಸ್ಥಿತಿ ಬಂದಿದೆ. ಕಾನ್ವೆಂಟ್ ಸಂಸ್ಕೃತಿಯಿಂದ ನಾವು ಕೃಷಿ ಮತ್ತು ಜಾನಪದ ಸಂಸ್ಕೃತಿಗೆ ಸಾಗಿದಾಗ ಕನ್ನಡ ಕಟ್ಟುವ ಕೆಲಸವಾಗುತ್ತದೆ. ಇದಕ್ಕೆ ಕನ್ನಡಿಗರು ಕಂಕಣ ಬದ್ಧರಾಗಿ ನಿಲ್ಲಬೇಕು. ನುಡಿ ಬೀಜಗಳನ್ನು ಬಿತ್ತಿ ಅಕ್ಷರ ಕ್ರಾಂತಿ ಮಾಡುವ ತುರ್ತು ಇಂದು ಇದೆ. ಇದು ಯುವ ಸಮುದಾಯದಿಂದ ಸಾಧ್ಯ. ಅಲ್ಲದೆ ಜಗತ್ತಿನ ಎಲ್ಲಾ ಭಾಷೆಗೆ ಗೌರವ ಕೊಟ್ಟು ಕನ್ನಡ ಭಾಷೆಯನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಬೇಕು.
ಆ ಭಾವವನ್ನು ನಮ್ಮ ಹಿರಿಯರು ಕೂಡ ನಮಗೆ ನೀಡಿ ಹೋಗಿದ್ದಾರೆ. ಅಕ್ಷರ ಸಾಹಿತ್ಯ, ಅನುಭವ ಸಾಹಿತ್ಯ, ಅನುಭಾವ ಸಾಹಿತ್ಯ ಚಿಂತನೆ ನಿಮ್ಮ ಅಭಿಮುಖ ಕನ್ನಡ ಸಾಹಿತ್ಯ ವೇದಿಕೆ ಮಾಡಲಿ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜನಪದ ಲೋಕಾನುಭಾವಿ ಸಿದ್ಧನಮಠದ ಯುಗಧರ್ಮ ರಾಮಣ್ಣ ಅವರು ವಿದ್ಯಾರ್ಥಿನಿಯ ರನ್ನು ಕುರಿತು ತಮ್ಮ ತತ್ವಪದಗಳನ್ನು ಹಾಡುವ ಮೂಲಕ ಅನುಭಾವ ಚಿಂತನೆ ಮೂಡಿಸಿದರು. ಈ ಕಾಲದ ವಿದ್ಯಾರ್ಥಿನಿಯರು ನಮ್ಮ ಹಿರಿಯರು ಹಾಕಿಕೊಂಡು ಮಾರ್ಗದಲ್ಲಿ ಸಾಗಬೇಕು. ಆ ಮೂಲಕ ಈ ನಾಡಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀವು ಕೊಡುಗೆ ನೀಡಬೇಕು ಎಂದರು.
ಡಾ. ಎಚ್.ಎಂ. ಲೋಹಿತ್ ಪ್ರಾಸ್ತಾವಿಕ ನುಡಿಗಳಲ್ಲಿ, ವಿದ್ಯಾರ್ಥಿನಿಯರಲ್ಲಿ ಹುದುಗಿದ ಪ್ರತಿಭೆಯನ್ನು ಅರಳಿಸುವ ಕೆಲಸವನ್ನು ಅಭಿಮುಖ ಕನ್ನಡ ಸಾಹಿತ್ಯ ವೇದಿಕೆ ಮಾಡಲಿದೆ ಎಂದರು.
ಕಾಲೇಜಿನ ಐಕ್ಯೂಎಸಿ ಸಂಚಾಲಕ ಪ್ರೊ. ಆರ್. ಆರ್. ಶಿವಕುಮಾರ್ ಮಾತನಾಡಿ, ಕನ್ನಡ ಕಲಿಕೆಯ ಮೂಲಕ ನೀವು ಭಾರತದ ಅತ್ಯುನ್ನತ ಹುದ್ದೆಯನ್ನು ಪಡೆಯಬಹುದು. ಕನ್ನಡ ಕಲಿಕೆಗೆ ಹಿಂಜರಿಕೆ ಬೇಡ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ರಣಧೀರ ಅವರು ಅಭಿಮುಖ ಕನ್ನಡ ಸಾಹಿತ್ಯ ವೇದಿಕೆ ದೂರ ದೃಷ್ಟಿಯಿಟ್ಟಕೊಂಡು ಹುಟ್ಟು ಹಾಕ ಲಾಗಿದೆ. ಕನ್ನಡ ಸಾಹಿತ್ಯ ಮಾತ್ರವಲ್ಲ ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಮನೋ ವಿಜ್ಞಾನ, ಪುರಾಣ, ಬಾನುಲಿ, ದೂರದರ್ಶನ, ತತ್ವ ಶಾಸ್ತ್ರ ಇತ್ಯಾದಿ ಅನ್ಯಶಿಸ್ತುಗಳ ಜೊತೆಗೆ ಅಭಿಮುಖ ಗೊಳ್ಳುವ ಆಶಯ ಹೊಂದಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕಮಲಾ ಸೊಪ್ಪಿನ್ ಮಾತನಾಡಿ, ನಮ್ಮ ಕನ್ನಡ ನಾಡು ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಕನ್ನಡ ಸಾಹಿತ್ಯ ತನ್ನದೆಯಾದ ಮಹತ್ವ ಪಡೆದಿದೆ. ಕನ್ನಡ ಸಾಹಿತ್ಯ ಓದುವ ಮೂಲಕ ವಿದ್ಯಾರ್ಥಿನಿಯರೂ ಕೂಡ ಸಾಹಿತ್ಯ ರಚನೆಗೆ ತೊಡಗಬೇಕು. ಆ ಆಸಕ್ತಿ ನಿಮ್ಮಲ್ಲಿ ಮೂಡಲಿ ಎಂದು ಹೇಳಿದರು.
ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ. ಆರ್.ಜಿ. ಕವಿತ ಗಣ್ಯರನ್ನು ಪರಿಚಯಿಸಿದರು. ಅನಂತಕುಮಾರ್ ಜಿ.ಎಸ್. ಮತ್ತು ಕಲಾಚಾರ್ ಕೆ.ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕು|| ಲತಾ ಬಿ.ಎ. ಸ್ವಾಗತಿಸಿದರು.
ಕು|| ವಂದನಾ ಎನ್.ಕೆ. ವಂದಿಸಿದರು. ಅಂಜಲಿ ಡಿ. ಮತ್ತು ಪ್ರಿಯಾಂಕ ಎಂ.ಹೆಚ್. ಕಾರ್ಯಕ್ರಮವನ್ನು ನಿರೂಪಿಸಿದರು.