ಮಲೇಬೆನ್ನೂರು, ಡಿ.16- ಬೆಳ್ಳೂಡಿ ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಬೀರಪ್ಪನ ಕಾರ್ತಿಕೋತ್ಸವ ಮತ್ತು ದೊಡ್ಡ ಎಡೆ ಜಾತ್ರೆ ಸೋಮವಾರ ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.
ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ದೊಡ್ಡ ಎಡೆ ಪೂಜೆಯನ್ನು ಈರಗಾರರು ಶ್ರದ್ಧಾ-ಭಕ್ತಿಯಿಂದ ನೆರವೇರಿಸಿದ ಬಳಿಕ ಮಹಾಅನ್ನ ಸಂತರ್ಪಣೆಗೆ ಚಾಲನೆ ನೀಡಲಾ ಯಿತು. ಸಾಮೂಹಿಕ ವಿವಾಹದಲ್ಲಿ ಐದು ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದೇವಸ್ಥಾನಕ್ಕೆ ಬಾಳೆಹಣ್ಣಿನ ಗೊನೆ, ಅಡಿಕೆ ಗೊನೆ ಮತ್ತು ತೆಂಗಿನ ಕಾಯಿ ಮತ್ತು ಹೂವುಗಳಿಂದ ಮಾಡಲಾಗಿದ್ದ ಅಲಂಕಾರ ಗಮನ ಸೆಳೆಯಿತು. ಶನಿವಾರ ರಾತ್ರಿ ಶ್ರೀ ಆಂಜನೇಯ ಸ್ವಾಮಿ ಕಾರ್ತಿಕೋತ್ಸವ ಮತ್ತು ಭಾನುವಾರ ರಾತ್ರಿ ಶ್ರೀ ಬೀರಲಿಂಗೇಶ್ವರ ಕಾರ್ತಿಕೋತ್ಸವ ಹಾಗೂ ಸೋಮವಾರ ರಾತ್ರಿ ಶ್ರೀ ಬಸವೇಶ್ವರ ಕಾರ್ತಿಕೋತ್ಸವ ಜರುಗಿತು.
ಮಂಗಳವಾರ ರಾತ್ರಿ ಶ್ರೀ ಉಡಸಲಾಂಭಿಕೆ ದೇವಿ ಕಾರ್ತಿಕೋತ್ಸವ ನಡೆಯಲಿದೆ.