ಹರಪನಹಳ್ಳಿ, ಡಿ. 15 – ಪಟ್ಟಣದ ಹೊರವಲಯದಲ್ಲಿರುವ ಲಕ್ಷ್ಮಿ ವೆಂಕಟೇಶ್ವರ ರಥೋತ್ಸವ ನೆರೆದಿದ್ದ ಅಪಾರ ಭಕ್ತರ ಸಮ್ಮುಖದಲ್ಲಿ ಭಾನುವಾರ ಸಂಜೆ ಸಡಗರ, ಸಂಭ್ರಮದಿಂದ ಜರುಗಿತು.
ಬೆಳಗಿನ ಜಾವ ದೇವಸ್ಥಾನದಲ್ಲಿ ಅರ್ಚಕರು ಪೂಜಾ ಕೈಂಕರ್ಯ ನೇರವೇರಿಸು ತ್ತಿದ್ದಂತೆ ಸರತಿ ಸಾಲಿನಲ್ಲಿ ಸಾಗಿ ಭಕ್ತರು ಸ್ವಾಮಿಯ ದರ್ಶನ ಪಡೆದರು. ಸಂಜೆ ವೇಳೆಗೆ ಸ್ವಾಮಿಯನ್ನು ಸಕಲ ಬಿರುದಾವಳಿಗಳೊಂದಿಗೆ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿದ ನಂತರ, ದೇವಸ್ಥಾನದಿಂದ ಮಂಗಳ ವಾದ್ಯ ಮೇಳಗ ಳೊಂದಿಗೆ ಪಲ್ಲಕ್ಕಿ ಉತ್ಸವ ಹೊರಟಿತು.
ರಥವನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿ ಅರ್ಚಕ ಬಳಗವು ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸುತ್ತಿದ್ದಂತೆ ಭಕ್ತರು ಗೋವಿಂದ, ಗೋವಿಂದ ಲಕ್ಮಿರಮಣ ಗೋವಿಂದ ಎಂದು ಜೈಕಾರ ಕೂಗಿದರು.
ರಥವನ್ನು ಎಳೆಯಲು ಪ್ರಾರಂಭಿಸುತ್ತಿದ್ದಂತೆ ನೆರೆದ ಅಪಾರ ಭಕ್ತರು ತೇರಿನ ಗಾಲಿಗಳಿಗೆ ತೆಂಗಿನಕಾಯಿ ಒಡೆದು, ಬಾಳೆಹಣ್ಣು, ತೂರಿ ಭಕ್ತಿ ಮೆರೆದರು.
ಈ ವೇಳೆ ಶಾಸಕರಾದ ಎಂ.ಪಿ. ಲತಾಮಲ್ಲಿಕಾರ್ಜುನ್ರವರಿಗೆ ದೇವಸ್ಥಾನದ ಕಮಿಟಿ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ವಕೀಲರಾದ ಸಿ. ಚಂದ್ರಶೇಖರ್ ಭಟ್ಟ್, ತಹಶೀಲ್ದಾರ್ ಗಿರೀಶ್ ಬಾಬು, ಸಿ.ಪಿ.ಐ. ನಾಗರಾಜ ಕಮ್ಮಾರ ಸೇರಿದಂತೆ ಇತರರು ಇದ್ದರು.