ಹಿಂದುಳಿದ ವರ್ಗಗಳ ನಿಗಮಕ್ಕೆ ಅನುದಾನ ನೀಡಿ, ಇಲ್ಲವೇ ಮುಚ್ಚಿ ಬಿಡಿ : ಬಿಜೆಪಿ ಪ್ರತಿಭಟನೆ

ಹಿಂದುಳಿದ ವರ್ಗಗಳ ನಿಗಮಕ್ಕೆ ಅನುದಾನ ನೀಡಿ, ಇಲ್ಲವೇ ಮುಚ್ಚಿ ಬಿಡಿ : ಬಿಜೆಪಿ ಪ್ರತಿಭಟನೆ

ದಾವಣಗೆರೆ, ಡಿ. 13-  ರಾಜ್ಯದಲ್ಲಿ ಹಿಂದುಳಿದ ವರ್ಗಗಳ ನಿಗಮ ಮಂಡಳಿಗಳಿಗೆ ಅನುದಾನ ಬಿಡುಗಡೆ ಮಾಡಿ ಇಲ್ಲವೇ ಮುಚ್ಚಿ ಬಿಡಿ ಎಂಬ ಘೋಷಣೆಯೊಂದಿಗೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಇಂದು ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಬಿಜೆಪಿ ಜಿಲ್ಲಾ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಹೊರಟು, ಜಯದೇವ ವೃತ್ತ, ಪಿ.ಬಿ. ರಸ್ತೆ ಮೂಲಕ ಉಪವಿಭಾಗಾಧಿಕಾರಿಗಳ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ಮನವಿ ಸಲ್ಲಿಸಲಾಯಿತು. 

ಇದೇ ವೇಳೆ ಬಿಜೆಿಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಂಕಷ್ಟ ಬಂದಾಗ ಮಾತ್ರ ಅಹಿಂದ ಜಪ ಮಾಡುತ್ತಾರೆ. ಆದರೆ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡದೇ ಹಿಂದುಳಿದ ವರ್ಗಗಳನ್ನು ತುಳಿಯುವ ವ್ಯವಸ್ಥಿತವಾದ ಕೆಲಸ ಮಾಡಲಾಗುತ್ತಿದೆ ಎಂದು ದೂರಿದರು.

ಹಿಂದುಳಿದ ವರ್ಗಗಳ ಸಮುದಾಯದ ಸಮಗ್ರ ಅಭಿವೃದ್ಧಿಗೆ ನಿಗಮ ಆರಂಭಿಸಿ ಒಂದು ಸಾವಿರ ಕೋಟಿ ಅನುದಾನ ನೀಡಿತ್ತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಜೆಟ್‌ನಲ್ಲಿ 1500 ಕೋಟಿ ಘೋಷಣೆ ಮಾಡಿ ಕೇವಲ 57.4ಕೋಟಿ ಮಾತ್ರ ವೆಚ್ಚ ಮಾಡಿ ಹಿಂದುಳಿದ ವರ್ಗಗಳಿಗೆ ವಂಚಿಸಿದ್ದಾರೆಂದು ಆರೋಪಿಸಿದರು.

ಹಿಂದುಳಿದ ವರ್ಗಗಳ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಅರಿವು ಎಂಬ ಸಾಲ-ಸೌಲಭ್ಯ ಯೋಜನೆ ಯಡಿ ಲಕ್ಷಾಂತರ ವಿದ್ಯಾರ್ಥಿಗಳು ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದ್ದರೂ ಈವರೆಗೆ ಕೇವಲ 900 ವಿದ್ಯಾರ್ಥಿಗಳಿಗೆ ಮಾತ್ರ ಸಾಲ-ಸೌಲಭ್ಯ ಒದಗಿಸಿದೆ. ಸರ್ಕಾರ ಕೂಡಲೇ ಬಾಕಿ ಇರುವ ವಿದ್ಯಾರ್ಥಿಗಳಿಗೆ ಸಾಲ-ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಂ.ಬಸವರಾಜನಾಯ್ಕ, ಮುಖಂಡರಾದ ಬಿ.ಎಂ. ಸತೀಶ ಕೊಳೇನಹಳ್ಳಿ, ಶಿವನಗೌಡ ಟಿ. ಪಾಟೀಲ್, ಮಹೇಂದ್ರ ಹೆಬ್ಬಾಳು, ರವಿಕುಮಾರ್, ಎನ್. ಮಂಜುನಾಥ್‌ ಮತ್ತಿತರರು ಭಾಗವಹಿಸಿದ್ದರು.

error: Content is protected !!