ಹರಿಹರ, ಡಿ.11- ವಿದ್ಯಾರ್ಥಿಗಳು ಪ್ರತಿ ನಿತ್ಯ ದಿನ ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಂಡರೆ ಜ್ಞಾನಾರ್ಜನೆ ವೃದ್ಧಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಜಿ.ಎಂ ಗಂಗಾಧರಸ್ವಾಮಿ ಅವರು ಶಾಲಾ ಮಕ್ಕಳಿಗೆ ಕಿವಿಮಾತು ಹೇಳಿದರು.
ನಗರದ ವಿವಿಧ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಶಾಲಾ ಮಕ್ಕಳೊಂದಿಗೆ ಬೆರೆತು ಅವರಿಗೆ ಬೋಧನೆ ಮಾಡುವ ವೇಳೆ ಅವರು ಹೇಳಿದರು. ವಿದ್ಯಾರ್ಥಿ ಜೀವನದಲ್ಲಿ ಆತ್ಮ ವಿಶ್ವಾಸ ಬಹಳ ಮುಖ್ಯ ಎಂದ ಅವರು, ಶಿಕ್ಷಕರು ಹೇಳಿಕೊಡುವ ಪಾಠವನ್ನು ಸರಿಯಾಗಿ ಆಲಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಸಮಯ ಪರಿಪಾಲನೆಗೆ ಹೆಚ್ಚು ಒತ್ತು ನೀಡುವ ಜತೆಗೆ ಅವಶ್ಯಕತೆಗೆ ತಕ್ಕಷ್ಟೇ ಮೊಬೈಲ್ ಬಳಸಬೇಕೆಂದು ತಿಳಿಸಿದರು.
ಈ ಬಾರಿ ಹರಿಹರ ತಾಲ್ಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಹೊಸ ದಾಖಲೆ ಸೃಷ್ಟಿಸಬೇಕು. ಈ ನಿಟ್ಟಿನಲ್ಲಿ ಮಕ್ಕಳನ್ನು ತಯಾರಿಗೊಳಿಸಬೇಕು ಎಂದು ಶಿಕ್ಷಕರಿಗೆ ಸೂಚನೆ ನೀಡಿದರು.
ವಿವಿಧ ಶಾಲೆಗಳಲ್ಲಿನ ಬಿಸಿಯೂಟದ ಕೊಠಡಿ ಪರಿಶೀಲಿಸಿ, ಅಕ್ಷರ ದಾಸೋಹದ ದಾಸ್ತಾನು, ಬಿಸಿಯೂಟದ ವ್ಯವಸ್ಥೆ ಹಾಗೂ ಅಲ್ಲಿನ ಸ್ವಚ್ಛತೆಯ ಬಗ್ಗೆ ಮಾಹಿತಿ ಪಡೆದರು.