ದಾವಣಗೆರೆ, ಡಿ. 11- ರಾಜ್ಯದಲ್ಲಿ ಹಿಂದುಳಿದ ವರ್ಗಗಳ ನಿಗಮಗಳಿಗೆ ಹಣ ನೀಡಿ, ಇಲ್ಲವೇ ಮುಚ್ಚಿ ಬಿಡಿ ಎಂಬ ಘೋಷವಾಕ್ಯದೊಂದಿಗೆ ನಾಡಿದ್ದು ದಿನಾಂಕ 13 ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಿಂದ ಉಪ ವಿಭಾಗಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಂಕಷ್ಟ ಬಂದಾಗ ಮಾತ್ರ ಅಹಿಂದ ಜಪ ಮಾಡುತ್ತಾರೆ. ಆದರೆ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡದೇ ವ್ಯವಸ್ಥಿತವಾಗಿ ತುಳಿಯುವ ಕೆಲಸ ಮಾಡುತ್ತಿದ್ದಾರೆಂದು ದೂರಿದರು. ಹಿಂದುಳಿದ ವರ್ಗಗಳ ಸಮಗ್ರ ಅಭಿವೃದ್ಧಿಗೆ ನಿಗಮ ಪ್ರಾರಂಭಿಸಿ ಒಂದು ಸಾವಿರ ಕೋಟಿ ಅನುದಾನ ನೀಡಲಾಗಿತ್ತು. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಜೆಟ್‌ನಲ್ಲಿ 1500 ಕೋಟಿ ಘೋಷಣೆ ಮಾಡಿ ಕೇವಲ 57.4 ಕೋಟಿ ಮಾತ್ರ ವೆಚ್ಚ ಮಾಡಿ ಹಿಂದುಳಿದ ವರ್ಗಗಳಿಗೆ ವಂಚಿಸುತ್ತಿದೆ ಎಂದು ಆರೋಪಿಸಿದರು.
ಹಿಂದುಳಿದ ವರ್ಗಗಳ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಅರಿವು ಎಂಬ ಸಾಲ ಯೋಜನೆಯಡಿ ಲಕ್ಷಾಂತರ ವಿದ್ಯಾರ್ಥಿಗಳು ಸಾಲ-ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದರೂ ಈವರೆಗೆ ಕೇವಲ 900 ವಿದ್ಯಾರ್ಥಿಗಳಿಗೆ ಮಾತ್ರ ಸಾಲ-ಸೌಲಭ್ಯ ಒದಗಿಸಿದೆ. ಬಾಕಿ ಇರುವ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯ ಕಲ್ಪಿಸಬೇಕೆಂದರು. ಹೆಬ್ಬಾಳು ಮಹೇಂದ್ರ, ಕೊಳೇನಹಳ್ಳಿ ಬಿ.ಎಂ. ಸತೀಶ್, ಎನ್.ಎಂ. ಮಂಜುನಾಥ, ರವಿಕುಮಾರ್ ಪತ್ರಿಕಾಗೋಷ್ಠಿಯಲ್ಲಿದ್ದರು.