60 ಜನ ಕಲಾವಿದರ ಒಟ್ಟು ಕುಟುಂಬ ಬೀದಿಗೆ ತರಲು ಮುಂದಾದ ಪಾಲಿಕೆ ಅಧಿಕಾರಿಗಳು

60 ಜನ ಕಲಾವಿದರ ಒಟ್ಟು ಕುಟುಂಬ ಬೀದಿಗೆ ತರಲು ಮುಂದಾದ ಪಾಲಿಕೆ ಅಧಿಕಾರಿಗಳು

ಬಸಾಪುರ ಭಜನೆ ಕಲಾವಿದರು ಬೀದಿಗೆ : ಜಿಲ್ಲಾ ಸಚಿವರ ಮಾತಿಗೂ ಬೆಲೆ ಇಲ್ಲ

ದಾವಣಗೆರೆ, ಡಿ.11- ಪಾಲಿಕೆ ವ್ಯಾಪ್ತಿಯಲ್ಲಿ ಅದೆಷ್ಟೋ ಪಾರ್ಕ್, ರಸ್ತೆ, ಸರ್ಕಾರಿ ಜಾಗಗಳು ಅತಿಕ್ರಮಣ ಆಗಿವೆ. ಅವ್ಯಾವೂ ನಮ್ಮ ಪಾಲಿಕೆ ಅಧಿಕಾರಿಗಳ ಕಣ್ಣಿಗೆ ಕಂಡಿಲ್ಲ. ಸುಮಾರು 40 ವರ್ಷಗಳಿಂದ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿರುವ 60 ಜನ ಸದಸ್ಯರಿರುವ ಒಟ್ಟು ಕುಟುಂಬದ ಜಾಗ ದುರ್ಬೀನಿನ ಕಣ್ಣಿಗೆ ಬಿದ್ದ ಹಾಗೆ ನಮ್ಮ ಪಾಲಿಕೆ ಅಧಿಕಾರಿಗಳ ಕಣ್ಣಿಗೆ ಬಿದ್ದಿದೆ.

ರಾಜ್ಯದ ಮೂಲೆ ಮೂಲೆಯಲ್ಲಿ ಬಸವ ಚಿಂತನೆ ಬಿತ್ತುತ್ತಾ ಹೆಸರುವಾಸಿ ಆಗಿರುವ ಬಸಾಪುರದ ಭಜನಾ ಕಲಾವಿದರು ವಾಸ ಮಾಡುವ ಮನೆ ಈಗ ಪಾಲಿಕೆಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಕಳೆದ 15 ದಿನಗಳಲ್ಲಿ ಒಬ್ಬರಿಲ್ಲೊಬ್ಬ ಅಧಿಕಾರಿಗಳು ಮನೆ ಇರುವ ಜಾಗಕ್ಕೆ ಭೇಟಿ ನೀಡಿ ತರಹ ತರಹದ ಕಿರುಕುಳ ಕೊಡುತ್ತಲೇ ಇದ್ದಾರೆ. ವಾರದ ಹಿಂದೆ ಅದಾಗಲೇ ಮೂರು ಅಡಿ ಕಾಲು ದಾರಿ ಇದೆ ಎಂದು ತೆರವುಗೊಳಿಸಿದ್ದರು. ತೆರವಿನ ಬಳಿಕ ಬಿದ್ದು ಹೋಗಿದ್ದ ಗೋಡೆಗಳನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮನೆ ಪುನರ್ ನಿರ್ಮಾಣ ಮಾಡಿ ಕೊಂಡ ಕಲಾವಿದರು ನೆಮ್ಮದಿಯಿಂದ ಇದ್ದರು. ಆದರೆ, ಇಂದು ಮತ್ತೆ ಪಾಲಿಕೆ ಇಂಜಿನಿಯರ್ ಭೇಟಿ ನೀಡಿ, ಪೂರ್ಣ ಮನೆ ಕೆಡವಿ, ಬೇರೆ ಕಡೆ ಜಾಗ ಕೊಡುತ್ತೇವೆ, ಅಲ್ಲಿ ನಿರ್ಮಿಸಿಕೊಳ್ಳಿ ಎಂದು ತಿಳಿಸಿದ್ದಾರಂತೆ.

15 ದಿನಗಳ ಹಿಂದೆ ಬಂದಿದ್ದ ಅಧಿಕಾರಿಗಳ ತಂಡ ಸಮೀಕ್ಷೆ ನಡೆಸಿ, ಮೂರು ಅಡಿ ದಾರಿ ಒತ್ತುವರಿ ಆಗಿದೆ ಎಂದಾಗ ಬಸವ ಕಲಾ ಲೋಕದ ಬಡ ಕಲಾವಿದರು ನಾಲ್ಕು ಅಡಿ ತೆರವು ಮಾಡಿಕೊಟ್ಟು ಮನೆ ನಿರ್ಮಿಸಿಕೊಂಡರು. ಅಲ್ಲಿಗೆ ಸಮಸ್ಯೆ ಬಗೆಹರಿಯಿತು ಎಂದು ನಿಟ್ಟುಸಿರು ಬಿಟ್ಟರು. ಆದರೆ, ಈಗ ಮತ್ತೆ ದಿಢೀರ್ ಪ್ರತ್ಯಕ್ಷ ಆಗಿರುವ ಪಾಲಿಕೆ ಇಂಜಿನಿಯರ್‌ಗಳು ನೀವು ಸಂಪೂರ್ಣ ಮನೆ ಖಾಲಿ ಮಾಡಿ ಬೇರೆ ಕಡೆ ಜಾಗ ಕೊಡುತ್ತೇವೆ ಎನ್ನುತ್ತಿದ್ದಾರೆ.

ಹಸುಗೂಸು, ವಯೋವೃದ್ಧರು, ವಯಸ್ಸಿಗೆ ಬಂದ ಮಕ್ಕಳ ತುಂಬು ಕುಟುಂಬದ ಪರಿಸ್ಥಿತಿಯನ್ನೂ ಅರಿಯದ ನಿರ್ದಯಿ ಪಾಲಿಕೆ ಅಧಿಕಾರಿಗಳು ಏಕಾಏಕಿ ಕುಟುಂಬವನ್ನು ಮನೆಯಿಂದ ಹೊರಹಾಕಿ, ಜಾಗ ಕೊಟ್ಟರೆ ಅವರು ಬದುಕುವುದಾದರೂ ಹೇಗೆ ಎಂಬುದನ್ನೂ ಸಹ ಆಲೋಚಿಸದೆ ಇರುವುದು ಇವರ ಜನಪರ ಕಾಳಜಿಗೆ ಹಿಡಿದ ಕೈಗನ್ನಡಿ ಆಗಿದೆ.

error: Content is protected !!