ದಾವಣಗೆರೆ, ಡಿ.11- ಇ-ಟೆಂಡರ್ ಖರೀದಿ ವ್ಯವಸ್ಥೆಯನ್ನು ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಬೇಕೆಂದು ಆಗ್ರಹಿಸಿ ರೈತರ ಒಕ್ಕೂಟವು ಎಪಿಎಂಸಿ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದೆ.
ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಎಪಿಎಂಸಿ ಪ್ರಾಂಗಣದಲ್ಲಿ ಮಾತ್ರ ಇ-ಟೆಂಡರ್ ಪದ್ಧತಿಯಲ್ಲಿ ಖರೀದಿ ವಹಿವಾಟು ಜಾರಿಗೊಳಿಸಿ ರುವುದಕ್ಕೆ ಸಮಸ್ತ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.
ಇ-ಟೆಂಡರ್ ಜಾರಿಯಿಂದ ಧಾರಣೆಯಲ್ಲಿ ಏರಿಕೆ ಕಂಡಿದೆ. ಆದರೆ ಹಳ್ಳಿಗಳಲ್ಲಿ ಕೊಯ್ಲು ಮಾಡಿ, ರಾಶಿ ಮಾಡಿರುವ ಧಾನ್ಯವನ್ನು ನೇರ ಖರೀದಿ ಮಾಡಲಾಗುತ್ತಿದೆ. ಇದರಿಂದ ಹಳ್ಳಿಗಳಲ್ಲಿ ಖರೀದಿಸುವ ಧಾನ್ಯಗಳ ಬೆಲೆ ಏರಿಕೆ ಆಗುತ್ತಿಲ್ಲ. ಹಾಗಾಗಿ ಗ್ರಾಮೀಣ ಭಾಗದಲ್ಲೂ ಈ ವ್ಯವಸ್ಥೆ ಜಾರಿಗೊಳಿಸಬೇಕೆಂದರು.
ಈ ಇ-ಟೆಂಡರ್ ಖರೀದಿ ವಹಿವಾಟು ಪದ್ಧತಿಯನ್ನು ಗ್ರಾಮೀಣ ಪ್ರದೇಶದಲ್ಲಿನ ಕಣಗಳಲ್ಲಿ ಅಥವಾ ಕಾಂಕ್ರೀಟ್ ರಸ್ತೆಗಳಲ್ಲಿ ರಾಶಿ ಹಾಕಿ ಸಂಗ್ರಹಿಸಿರುವ ಧಾನ್ಯಗಳಿಗೂ ವಿಸ್ತರಿಸಬೇಕು. ಆಗ ಹಳ್ಳಿಗಳಲ್ಲಿ ಮಾರಾಟ ಮಾಡುವ ಧಾರಣೆಯೂ ಏರಿಕೆ ಆಗುತ್ತದೆ ಎಂದಿದ್ದಾರೆ.
ವೇಮೆಂಟ್-ಪೇಮೆಂಟ್ ಪದ್ಧತಿಯನ್ನು ಕಡ್ಡಾಯವಾಗಿ ಜಾರಿಗೆ ತರಬೇಕು. ಪೇಮೆಂಟ್ ವಿಳಂಬ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ವೇಮೆಂಟ್ ಸ್ಲಿಪ್‌ನಲ್ಲಿ ಖರೀದಿದಾರರ ಹೆಸರು ಮಾತ್ರ ನಮೂದಿಸಲಾಗುತ್ತಿದ್ದು, ಇದರಲ್ಲಿ ರೈತನ ಹೆಸರು ಮತ್ತು ಊರನ್ನು ಕಡ್ಡಾಯವಾಗಿ ನಮೂದಿಸಬೇಕು ಮತ್ತು ಖರೀದಿಸಿದ ಬೆಲೆಯನ್ನೂ ನಮೂದಿಸಬೇಕು ಎಂದು ಹೇಳಿದ್ದಾರೆ.
ಶ್ಯೂಟ್ ಹಾಗೂ ಡಿಸ್ಕೌಂಟ್ ಪದ್ಧತಿಯನ್ನು ನಿಷೇಧಿಸಬೇಕು. ಶ್ಯೂಟ್ ಪಡೆದವರನ್ನು ಮತ್ತು ಡಿಸ್ಕೌಂಟ್ ಕೇಳಿದವರನ್ನು ತಕ್ಷಣವೇ ಬಂಧಿಸುವ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಹಮಾಲರ ಕೂಲಿಯನ್ನು ಸಂಪೂರ್ಣವಾಗಿ ಖರೀದಿದಾರರೇ ಭರಿಸಬೇಕು. ಹಮಾಲರು ಸ್ಯಾಂಪಲ್ ಪಡೆಯುವುದನ್ನು ನಿಷೇಧಿಸಬೇಕು ಎಂಬುದು ರೈತ ಒಕ್ಕೂಟದ ಬೇಡಿಕೆಯಾಗಿದೆ.
ಈ ವೇಳೆ ರೈತ ಮುಖಂಡರಾದ ಕೊಳೇನಹಳ್ಳಿ ಬಿ.ಎಂ. ಸತೀಶ್, ಬೆಳವನೂರು ನಾಗೇಶ್ವರರಾವ್, ಲೋಕಿಕೆರೆ ನಾಗರಾಜ್, ವಿಜಯಲಕ್ಷ್ಮಿ ಮಾಚಿನೇನಿ, ಎ.ವೈ. ಪ್ರಕಾಶ್, ಧನಂಜಯ ಕಡ್ಲೆಬಾಳ್, ಗೋಣಿವಾಡ ಮಂಜುನಾಥ, ರುದ್ರಕಟ್ಟೆ ಪರಮೇಶ್ವರಪ್ಪ, ಆರುಂಡಿ ಪುನೀತ್, ಮಾಜಿ ಮೇಯರ್ ವಸಂತಕುಮಾರ್, ಅಣಬೇರು ಕುಮಾರಸ್ವಾಮಿ, ಶಿವಪ್ರಕಾಶ್, ಗೋಪನಾಳ್ ಪಾಲಾಕ್ಷಪ್ಪ, ವಡ್ಡಿನಳ್ಳಿ ಸಿದ್ದೇಶ್, ಆರನೇ ಕಲ್ಲು ವಿಜಯಕುಮಾರ್, ಕಾಶಿಪುರ ಸುರೇಶ್, ಕುರ್ಕಿ ರೇವಣಸಿದ್ದಪ್ಪ, ಐಗೂರು ತಿಪ್ಪೇಸ್ವಾಮಿ ಇತರರಿದ್ದರು.