ದಾವಣಗೆರೆ, ಡಿ. 11- ಡಾ.ಹೆಚ್.ಎಫ್.ಕಟ್ಟಿಮನಿ ಪ್ರೌಢಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಾಳೆ ದಿನಾಂಕ 12 ರ ಗುರುವಾರ ಮಧ್ಯಾಹ್ನ 2.30 ಕ್ಕೆ ನಗರದ ಈಶ್ವರಮ್ಮ ಪ್ರೌಢಶಾಲೆಯಲ್ಲಿ ಪುಸ್ತಕ ಪಂಚಮಿಯ 15 ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ದಾವಣಗೆರೆ ಘಟಕದ ಸಹ ಸಂಚಾಲಕ ಡಾ. ಸಿ.ಆರ್. ಬಾಣಾಪುರಮಠ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಶ್ವರಮ್ಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ಸುಜಾತ ಕೃಷ್ಣ ಅಧ್ಯಕ್ಷತೆ ವಹಿಸುವರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಜಿ.ಕೊಟ್ರೇಶ್, ದಾವಣಗೆರ-ಹರಿಹರ ಅರ್ಬನ್ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ್, ಲೆಕ್ಕಪರಿಶೋಧಕ ಬಸವರಾಜಪ್ಪ ಬೆಳಗಾವಿ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಶಾಲಾ ಪ್ರಾಚಾರ್ಯ ಕೆ.ಎಸ್. ಪ್ರಭುಕುಮಾರ್, ಸಹ ಪ್ರಾಚಾರ್ಯರಾದ ಶಶಿರೇಖಾ ಭಾಗವಹಿಸಲಿದ್ದಾರೆ.
ಶಿಕ್ಷಣ ಪ್ರೇಮಿ, ಅನೇಕ ಶಿಕ್ಷಣ ಸಂಸ್ಥೆಗಳಿಗೆ ಬುನಾದಿ ಹಾಕಿದ ಡಾ.ಹೆಚ್.ಎಫ್. ಕಟ್ಟಿಮನಿ ಅವರು ಪಂಚಮಿಯ ದಿನ ಜನ್ಮ ತಾಳಿದ ಕಾರಣ `ಪುಸ್ತಕ ಪಂಚಮಿ’ ಎಂಬ ಹೆಸರಿನಲ್ಲಿ ಸತತವಾಗಿ 14 ವರ್ಷಗಳಿಂದ ಈ ಕಾರ್ಯಕ್ರಮ ನಡೆದುಬಂದಿದ್ದು, ಇದೀಗ 15 ನೇ ವರ್ಷದ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ರಾಜ್ಯ ಹಾಗೂ ಹೊರ ದೇಶದ ಶಿಕ್ಷಣ ಪ್ರೇಮಿ ದಾನಿ ಗಳು ವಿಶಾಲ ಹೃದಯದಿಂದ ದೇಣಿಗೆ ನೀಡಿದ ಹಣದ ಬಡ್ಡಿ ಹಣದಲ್ಲಿ ಪ್ರತಿ ವರ್ಷ ಕಾರ್ಯಕ್ರಮ ಮಾಡುತ್ತಾ ಬರಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ದಾನಿಗಳ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ 55 ದಾನಿಗಳಾಗಿರುವುದು ಅವರ ಹೃದಯ ಶ್ರೀಮಂತಿಕೆಗೆ ಸಾಕ್ಷಿ ಎಂದು ಹೇಳಿದರು.
ಕಳೆದ ವರ್ಷ 22 ಶಾಲೆಗಳ ಫಲಾನುಭವಿಗಳಿಗೆ ಪುಸ್ತಕ ಗಳನ್ನು ವಿತರಿಸಿ ಅವರಲ್ಲಿ ಓದುವ ಹವ್ಯಾಸ ಹೆಚ್ಚಿಸುವ ಗುರಿ ಹೊಂದಲಾಗಿತ್ತು. ಈ ಬಾರಿ 24 ಪ್ರಾಥಮಿಕ, ಪ್ರೌಢಶಾಲೆಗಳ ಬಡ ಪ್ರತಿಭಾವಂತ ಹಾಗೂ ಉತ್ತಮ ಹಾಜರಾತಿಯ 58 ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಕಾಶ್ ಬೂಸ್ನೂರು, ವಿ.ಸಿ. ಪುರಾಣಿಕ ಮಠ, ನಿರಂಜನ್ ಉಪಸ್ಥಿತರಿದ್ದರು.