ದಾವಣಗೆರೆ, ಡಿ. 8 – ಪ್ರಕಾಶ್ ಪಡುಕೋಣೆ, ದ್ರಾವಿಡ್ ಕ್ರೀಡಾ ಅಕಾಡೆಮಿಯಂತೆಯೇ ದಾವಣ ಗೆರೆಯಲ್ಲಿಯೂ ಒಲಂಪಿಯನ್ಸ್ನ ಸೃಷ್ಟಿ ಮಾಡು ವಂಥ ಕ್ರೀಡಾ ಅಕಾಡೆಮಿ ಸ್ಥಾಪನೆಯಾಗಬೇಕಾದ ಅವಶ್ಯಕತೆ ಇದೆ ಎಂದು ಇನ್ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ, ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯ್ ಕುಮಾರ್ ಪ್ರತಿಪಾದಿಸಿದರು.
ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋ ಜಿಸಿದ್ದ 5ನೇ ರಾಷ್ಟ್ರ ಮಟ್ಟದ ಮುಕ್ತ ಕರಾಟೆ ಸ್ಪರ್ಧೆ-2024ರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರು, ಸಂಸದರು ಕ್ರೀಡಾ ಅಕಾಡೆಮಿ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಭಾವಿಸುತ್ತೇನೆ ಎಂದವರು ಹೇಳಿದರು.
ರಾಷ್ಟ್ರೀಯ ಮಟ್ಟದಲ್ಲಿ ಸ್ಟೆರಾಯ್ಡ್ ಸೇರಿದಂತೆ ಇನ್ನಿತರೆ ಉದ್ದೀಪನ ವಸ್ತುಗಳನ್ನು ಸೇವಿಸಿ ಕ್ರೀಡಾ ಪಟುಗಳು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದನ್ನು ನೋಡಿದ್ದೇವೆ. ಸಹಜವಾಗಿ ಸ್ಪರ್ಧಾಳುಗಳ ಪಾಲ್ಗೊಳ್ಳುವಿಕೆ ಉತ್ತಮ ಬೆಳವಣಿಗೆ. ದೇಹದಾರ್ಢ್ಯ ಹಾಗೂ ಕರಾಟೆಯಂತಹ ಸ್ಪರ್ಧೆಗಳು ಹೆಚ್ಚಾಗಿ ನಡೆಯಬೇಕು. ಕ್ರೀಡಾ ಪಟುಗಳು ಪ್ರತಿಯೊಂದು ಮನೆಯಿಂದಲೂ ಹೊರ ಬರಬೇಕಿದೆ ಎಂದು ಆಶಿಸಿದರು.
ಸಾವಿರಾರು, ಲಕ್ಷಾಂತರ ವಿದ್ಯಾರ್ಥಿಗಳು ಕರಾಟೆ ಅಭ್ಯಸಿಸಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ದಾವಣಗೆರೆಯಲ್ಲಿ ರಾಷ್ಟ್ರ ಮಟ್ಟದ ಮುಕ್ತ ಕರಾಟೆ ಸ್ಪರ್ಧೆ ನಡೆಸಲಾಗುತ್ತಿದೆ. ಇದು ದೇಶದ ಮೂಲೆ ಮೂಲೆಯನ್ನೂ ತಲುಪುವಂತಾ ಗಲಿ ಎಂದು ವಿನಯ್ ಕುಮಾರ್ ಹಾರೈಸಿದರು.
ಪೋಷಕರು ಮಕ್ಕಳಿಗೆ ಕೇವಲ ಓದಿನಲ್ಲಿ ಮುಳುಗಬೇಕು, ನೀಟ್, ಸಿಇಟಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಕ್ಕಳು ಹೆಚ್ಚು ತೊಡಗಿಸಿಕೊಳ್ಳಬೇಕು ಎಂಬ ಉದ್ದೇಶದ ಜೊತೆಗೆ ಕರಾಟೆ, ದೇಹದಾರ್ಢ್ಯ, ಕಬಡ್ಡಿ, ಸಂಗೀತ ಸೇರಿದಂತೆ ಕ್ರೀಡಾ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಿ. ಇದು ಜೀವನದ ಅವಿಭಾಜ್ಯ ಅಂಗ. ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಿ. ಕೇವಲ ಪುಸ್ತಕ ಓದಿನ ಹುಳುಗಳಂತೆ ಮಾಡಬೇಡಿ ಎಂದು ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಕರಾಟೆ ಸ್ಪರ್ಧೆ ಆಯೋಜಕ ರೆನ್ಸಿ ಹೆಚ್. ಮಲ್ಲಿಕಾರ್ಜುನ್, ಹೆಚ್.ಎಂ. ಕಾರ್ತಿಕ್, ಚನ್ನಕೇಶವ, ಲೋಹಿತ್ ಕುಮಾರ್, ಸಿದ್ದೇಶ್, ರಘು, ಸುಭಾಷ್ ಹೆಚ್.ಪಿ. ಕರಾಟೆ ತರಬೇತುದಾರರು ಹಾಜರಿದ್ದರು.