ದಾವಣಗೆರೆ, ಡಿ. 8- ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯದ ವಜ್ರಮಹೋತ್ಸವದ ಪ್ರಯುಕ್ತ ನಾಳೆ ದಿನಾಂಕ 9 ರ ಸೋಮವಾರ ಬೆಳಿಗ್ಗೆ 11 ಗಂಟೆಗೆ `ಅನನ್ಯ ಸಂಭ್ರಮ-2024′ ಗುರುವಂದನಾ, ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ದೃಶ್ಯಕಲಾ ಮಹಾವಿದ್ಯಾಲಯದ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬೋಧನಾ ಸಹಾಯಕರಾದ ದತ್ತಾತ್ರೇಯ ಎನ್. ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಬೆಳಿಗ್ಗೆ 10.15 ಕ್ಕೆ 2007 ನೇ ಸಾಲಿನ ತಂಡದವರಿಂದ ದೃಶ್ಯ ವಿಶ್ವ ಕಲಾ ಗ್ಯಾಲರಿಯಲ್ಲಿ ಆಯೋಜಿಸುತ್ತಿರುವ ಸಮೂಹ ಕಲಾ ಪ್ರದರ್ಶನಕ್ಕೆ ಜಿರಾಫೆ ಅಣುಕು ಶಿಲ್ಪಕಲಾ ಕೃತಿಯ ಉದ್ಘಾಟನೆ ಮಾಡುವ ಮೂಲಕ ಚಾಲನೆ ದೊರೆಯಲಿದೆ.
ನಂತರ 11ಗಂಟೆಗೆ ಗುರುವಂದನಾ ಸಭಾ ಕಾರ್ಯಕ್ರಮ ನಡೆಯಲಿದ್ದು, ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮತ್ತು ಹಾಲಿ ಸೇವೆ ಸಲ್ಲಿಸುತ್ತಿರುವ ಗುರು ವೃಂದವನ್ನು ಗೌರವಿಸಲಾಗುವುದು. ಅದೇ ದಿನ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ರವರೆಗೆ 2007 ನೇ ಸಾಲಿನ ವಿದ್ಯಾರ್ಥಿಗಳಲ್ಲಿ ಕೆಲವರಿಂದ ಬ್ರಾಂಡಿಂಗ್, ಡಿಜಿಟಲ್ ಮಾರ್ಕೆಟಿಂಗ್, ಯುಐ, ಯುಎಕ್ಸ್ ಡಿಸೈನಿಂಗ್, ಶಿಲ್ಪಕಲೆ, ವಿಇಎಕ್ಸ್ ಪ್ರೊಡಕ್ಸನ್ ಮೊದಲಾದ ವಿಷಯಗಳ ಕುರಿತು ಪ್ರಾತ್ಯಕ್ಷಿಕೆ ಮತ್ತು ಸಂವಾದ ನಡೆಯಲಿದೆ.
ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ. ಕುಂಬಾರ್ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಪ್ರಾಚಾರ್ಯ ಡಾ. ಜೈರಾಜ್ ಎಂ. ಚಿಕ್ಕಪಾಟೀಲ್, 2007 ನೇ ಸಾಲಿನ ವಿದ್ಯಾರ್ಥಿಗಳಾದ ಡಿ.ಪಿ. ಪವನ್, ಕೆ.ವಿ. ರಾಕೇಶ್ ಮತ್ತಿತರರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಸಂಜೆ 5.30 ಕ್ಕೆ ಸಮಾರೋಪ ಸಮಾರಂಭದಲ್ಲಿ ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜೈರಾಜ್ ಚಿಕ್ಕಪಾಟೀಲ್ ಅಧ್ಯಕ್ಷತೆ ವಹಿಸುವರು. ಡಾ. ಸತೀಶ್ ಕುಮಾರ್ ಪಿ. ವಲ್ಲೇಪುರೆ, 2007 ನೇ ಸಾಲಿನ ವಿದ್ಯಾರ್ಥಿಗಳಾದ ಹೆಚ್.ಕೆ. ಇಂದ್ರಕುಮಾರ್, ಆರ್.ಕೆ. ಅವಿನಾಶ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ದಿನಾಂಕ 9 ರಿಂದ ಇದೇ ದಿನಾಂಕ 15 ರವರೆಗೆ 2007 ನೇ ಸಾಲಿನಲ್ಲಿ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಅನುಸರಿಸಲ್ಪಡುತ್ತಿದ್ದ ದೃಶ್ಯಕಲಾ ಪಠ್ಯಕ್ರಮ ಮತ್ತು ದೃಶ್ಯಕಲಾ ಶೈಲಿಯ ದರ್ಶನ ಪ್ರಜ್ಞಾವಂತ, ಕಲಾಸಕ್ತ ನೋಡುಗರಿಗೆ ಆಗಲಿದೆ. ಪೆನ್ಸಿಲ್, ಪೆನ್, ಇಂಕ್ ಜಲವರ್ಣ, ಪೋಸ್ಟರ್ ವರ್ಣ, ಆಕ್ರಾಲಿಕ್ ಮಾಧ್ಯಮಗಳಲ್ಲಿ ಚಿತ್ರಕಲಾ ಕಾಗದ, ಪೋಸ್ಟರ್ ಕಾಗದ, ಕ್ಯಾನವಾಸ್ ಮೇಲೆ ರಚಿಸಿದ ಚಿತ್ರಗಳಲ್ಲದೇ ಕೆಲವು ಶಿಲ್ಪಗಳೂ ಸಹ ಪ್ರದರ್ಶನದಲ್ಲಿ ಇರಲಿವೆ ಎಂದು ಹೇಳಿದರು.
ಬಹುತೇಕ ಎಲ್ಲವೂ ಶ್ರೀಸಾಮಾನ್ಯರಿಗೆ ಮುದ ನೀಡಬಲ್ಲ ಕಲಾತ್ಮಕ ಕೌಶಲ್ಯದಿಂದ ಕೂಡಿರುವ ಕಲಾಕೃತಿಗಳು ಈ ಪ್ರದರ್ಶನದಲ್ಲಿವೆ.
ಕಲಾವಿದರಾದ ಅನಿಲ್ ಹೆರೂರು, ಆವಿನಾಶ್, ಬಸವರಾಜ್, ಹೆಚ್.ಕೆ. ಇಂದ್ರಕುಮಾರ್, ಹೆಚ್. ಕಿರಣ್, ಮಾರುತಿ ಕಾಮತ್, ಕೆ. ಲಕ್ಷ್ಮಣ್, ಕಿರಣ್ ಕುಮಾರ್, ನಮಿತಾ, ನಾಗರಾಜ್ ಎನ್. ಕಾಮತ್, ಮಲ್ಲಿಕಾರ್ಜುನ್, ಎಲ್. ನವೀನ್, ನಾರಾಯಣ ತೊರವಿ, ನೂರ್ ಫಾತೀಮಾ, ನಿತ್ಯಾನಂದ, ಪವನ, ಕೆ.ವಿ. ರಾಕೇಶ್, ಎನ್.ರಾಕೇಶ, ಜಿ.ಆರ್. ರಶ್ಮಿ, ರಶ್ಮಿ, ರವಿಕಿರಣ ಬಳೋಜಿ, ಎ.ಎನ್.ಶೀಲಾ, ಡಿ.ಸಿ. ಸಿದ್ದೇಶ್, ಸಿ. ಶ್ರೀಕಾಂತ್, ವಿ.ಟಿ. ಶ್ವೇತಾ, ಹೆಚ್.ಎಸ್. ಸುದರ್ಶನ್, ಬಿ.ಎಂ. ಸಂದೀಪ್, ಎಸ್.ವಿ. ವಿನಾಯಕ ಭಾಗವಹಿಸುವರು ಎಂದರು.
ಪ್ರತಿ ದಿನ ಬೆಳಿಗ್ಗೆ 10.30 ರಿಂದ ಸಂಜೆ 6 ರವರೆಗೆ ಕಲಾ ಪ್ರದರ್ಶನ ಏರ್ಪಡಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಹೆಚ್.ಕೆ. ಇಂದ್ರಕುಮಾರ್, ಡಿ.ಪಿ. ಪವನ್, ಕೆ.ವಿ. ರಾಕೇಶ್ ಉಪಸ್ಥಿತರಿದ್ದರು.