ದಾವಣಗೆರೆ, ಡಿ.8- ಪಂಚಮಸಾಲಿ ಸಮುದಾಯ ಮಕ್ಕಳ ಭವಿಷ್ಯಕ್ಕಾಗಿ 2ಎ ಮೀಸಲಾತಿಗಾಗಿ, ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ನಾಡಿದ್ದು ದಿನಾಂಕ 10ರಂದು ನಡೆಯುವ ಬೆಳಗಾವಿ ಸುವರ್ಣ ಸೌಧಕ್ಕೆ ಟ್ರ್ಯಾಕ್ಟರ್ ಸಮೇತ ಮುತ್ತಿಗೆಗೆ ಕರ್ನಾಟಕ ಲಿಂಗಾಯತ ಪಂಚಮಸಾಲಿ ವಕೀಲರ ಪರಿಷತ್ ಬೆಂಬಲ ಸೂಚಿಸಿದೆ.
ಬೆಳಗಾವಿಯಲ್ಲಿ ನಮ್ಮ ಪರಿಷತ್ ನಡೆಸಿದ ಸಮಾವೇಶದ ವೇಳೆ ಖುದ್ದು ಸಿಎಂ ಸಿದ್ದರಾಮಯ್ಯನವರು ಸ್ವಾಮೀಜಿ ಅವರೊಂದಿಗೆ ಮಾತನಾಡಿ, ಕಾಲಾವಕಾಶ ತೆಗೆದುಕೊಂಡು ಅವರ ಬೆಂಗಳೂರಿನ ಗೃಹ ಕಚೇರಿಯಲ್ಲಿ ಸಭೆ ಕರೆದಿದ್ದರು. ಆದರೆ, ನೀತಿ ಸಂಹಿತೆ ಕಾರಣ ನೀಡಿ ನಮ್ಮ ಬೇಡಿಕೆಗೆ ಸರಿಯಾಗಿ ಸ್ಪಂದಿಸಲಿಲ್ಲ ಎಂದು ಪರಿಷತ್ನ ಜಿಲ್ಲಾಧ್ಯಕ್ಷ ಹೆಚ್.ಎಸ್. ಯೋಗೇಶ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಈ ಸಮಾಜಕ್ಕೆ ಮೀಸಲಾತಿ ಸಿಗುವವರೆಗೆ ಹೋರಾಟ ನಿರಂತರವಾಗಿರಲಿದೆ ಹಾಗಾಗಿ ಡಿ.10ರಂದು ಶ್ರೀಗಳ ಸಮ್ಮುಖದಲ್ಲಿ `ಬೆಳಗಾವಿ ಸುರ್ವಣ ಸೌಧಕ್ಕೆ ಟ್ರ್ಯಾಕ್ಟರ್ ಸಮೇತ ಮುತ್ತಿಗೆ ಹಮ್ಮಿಕೊಂಡಿದ್ದು, ಅಂದಿನ ಹೋರಾಟಕ್ಕೆ ಪಂಚಮಸಾಲಿ ಸಮುದಾಯದ 150ಕ್ಕೂ ಅಧಿಕ ವಕೀಲರು ಜಿಲ್ಲೆಯಿಂದ ತೆರಳಲಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ಸರ್ಕಾರದ ವೇಳೆ 2ಎ ಮೀಸಲಾತಿ ಹೋರಾಟ ಬೆಂಬಲಿಸಿದ್ದ ಲಕ್ಷೀ ಹೆಬ್ಬಾಳ್ಕರ್, ವಿನಯ್ ಕುಲಕರ್ಣಿ, ವಿಜಯಾನಂದ ಕಾಶ್ಯಪ್ಪನವರ್ ಈಗ ಸಿಎಂ ಸಿದ್ದರಾಮಯ್ಯ ಅವರನ್ನು ಮೆಚ್ಚಿಸಲು, ಸಮಾಜದ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಇದನ್ನು ನೋಡಿದರೆ, ಇವರಿಗೆಲ್ಲಾ ಅಧಿಕಾರ ಮುಖ್ಯವಾಗಿದೆಯೇ ವಿನಃ ಸಮಾಜದ ಉದ್ಧಾರವಲ್ಲ ಎಂದು ಕಿಡಿಕಾರಿದರು.
ಸಮುದಾಯದ ಮಕ್ಕಳ ಭವಿಷ್ಯಕ್ಕಾಗಿ ಪಂಚಮಸಾಲಿ ಸಮುದಾಯದ ಎಲ್ಲಾ ರಾಜಕಾರಣಿಗಳು ಪಕ್ಷಾತೀತವಾಗಿ ಹೋರಾಟ ನಡೆಸಬೇಕು ಎಂದು ಅವರು ಮನವಿ ಮಾಡಿದರು.
ಈ ವೇಳೆ ಪರಿಷತ್ನ ಟಿ.ಆರ್. ರವಿಶಂಕರ್, ಹೆಚ್.ಜಿ. ಬಸವರಾಜ, ವಿನಯಕುಮಾರ್ ಸಾಹುಕಾರ್, ರುದ್ರಗೌಡ ಪಾಟೀಲ್, ಗುರುಮೂರ್ತಿ ಕಾಶೀಪುರ, ಕೊಟ್ರೇಶ್ ಮತ್ತಿಹಳ್ಳಿ, ವನಮಾಲ, ಕತ್ತಲಗೆರೆ ನಾಗರಾಜ್ ಸುದ್ದಿಗೋಷ್ಠಿಯಲ್ಲಿದ್ದರು.