ಬಳ್ಳಾರಿಯಲ್ಲಿ ಮೃತ ಬಾಣಂತಿಯರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ

ಬಳ್ಳಾರಿಯಲ್ಲಿ ಮೃತ ಬಾಣಂತಿಯರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ

ಬಳ್ಳಾರಿ, ಡಿ.8- ಇಲ್ಲಿನ  ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್  ಭಾನುವಾರ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ನಡೆದ ಅಭಿನಂದನಾ ಸಮಾವೇಶದಲ್ಲಿ ಮಾತನಾಡಿ, ಈಗಾಗಲೇ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ ಆಗಿದೆ. ಇನ್ನೂ 3 ಲಕ್ಷ ರೂಪಾಯಿ ನೀಡಲಾಗುವುದು ಎಂದು ಹೇಳಿದರು.

ಬಳ್ಳಾರಿ ಬಿಮ್ಸ್​ನಲ್ಲಿ ಐವರು ಬಾಣಂತಿಯರು ಮೃತಪಟ್ಟಿರುವ ಘಟನೆ ದುರದೃಷ್ಟಕರ. ಮೃತ ಬಾಣಂತಿಯರೆಲ್ಲರೂ ಬಡ ಕುಟುಂಬದವರು. ಹೀಗಾಗಿ, ಮೃತ ಬಾಣಂತಿಯರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡುತ್ತೇವೆ ಎಂದು ಹೇಳಿದರು.

ಹೆರಿಗೆಗೆಂದು ಬಿಮ್ಸ್​ಗೆ ದಾಖಲಾಗಿದ್ದ ಒಂಬತ್ತು ಮಂದಿ ಗರ್ಭಿಣಿಯರಾದ ನಂದಿನಿ, ಲಲಿತಮ್ಮ, ಸುಮಯಾ, ರೋಜಾ, ಮುಸ್ಕಾನ್, ಅಮೃತಾ, ಮಹಾಲಕ್ಷ್ಮೀ, ರಾಜೇಶ್ವರಿ, ಸುಮಲತಾ ಎಂಬುವರಿಗೆ ನವೆಂಬರ್​ 9ರಂದು ಸಿಸೇರಿಯನ್​ ಮೂಲಕ ಹೆರಿಗೆ ಮಾಡಲಾಗಿತ್ತು. ಇವರಲ್ಲಿ ನಂದಿನಿ, ಲಲಿತಮ್ಮ, ರೋಜಾ, ಮುಸ್ಕಾನ್ ಹಾಗೂ ಸುಮಯಾ ಮೃತಪಟ್ಟಿದ್ದಾರೆ. ಇನ್ನುಳಿದ ನಾಲ್ವರು ಬಾಣಂತಿಯರು ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದರು.

327 ಬಾಣಂತಿಯರ ಸಾವು: ರಾಜ್ಯದಲ್ಲಿ ಕಳೆದ ಏಪ್ರಿಲ್ ತಿಂಗಳಿನಿಂದ ಇಲ್ಲಿಯವರೆಗೆ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ 327 ಬಾಣಂತಿಯರ ಸಾವು ಸಂಭವಿಸಿದ್ದು, ಪ್ರತಿಯೊಂದು ಕೂಡ ತಪಾಸಣೆ ಮಾಡಲಿದ್ದೇವೆ. ಲೆಕ್ಕಪರಿಶೋಧನೆ ವರದಿ ಸಲ್ಲಿಸಲು ಹೇಳಿದ್ದೇವೆ. ಉನ್ನತ ತಜ್ಞರನ್ನು ಕರೆಸಿ ಮತ್ತೊಮ್ಮೆ ತಪಾಸಣೆ ಮಾಡಲು ಹೇಳಿದ್ದೇವೆ. ಏಕೆಂದರೆ ಕೋರ್ಟ್ ಗಳಲ್ಲಿ ಕಾನೂನು ಹೋರಾಟ ಮಾಡಬೇಕಾಗಿದೆ. ಸರಿಯಾದ ಸಾಕ್ಷಿ ಸಂಗ್ರಹಿಸಬೇಕಾಗಿದೆ ಎಂದು ಸಚಿವರು ಹೇಳಿದ್ದಾರೆ.

error: Content is protected !!