ದಾವಣಗೆರೆ, ಡಿ.6- ಮನಬಂದಂತೆ ಹೇಳಿಕೆ ನೀಡಿ, ಪಕ್ಷದ ಶಿಸ್ತನ್ನು ಹಾಳು ಮಾಡುತ್ತಿರುವ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರನ್ನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಬೇಕೆಂದು ಹೊನ್ನಾಳಿ ತಾಲ್ಲೂಕು ಬಿಜೆಪಿ ಮುಖಂಡ ಶಾಂತರಾಜ್ ಪಾಟೀಲ್ ಅವರು ಪಕ್ಷದ ವರಿಷ್ಟರನ್ನು ಒತ್ತಾಯಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೇಣುಕಾಚಾರ್ಯರು ರಾಜಕೀಯಕ್ಕೆ ಬಂದ ನಂತರ ಎಲ್ಲರಿಗೂ ರೆಸಾರ್ಟ್ ರಾಜಕೀಯ ಕಲಿಸಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಶಾಸಕರ ಗುಂಪು ಕಟ್ಟಿಕೊಂಡು ಚೆನ್ನೈ, ಗೋವಾ ಮತ್ತು ಹೈದ್ರಾಬಾದ್ ರೆಸಾರ್ಟ್‌ಗೆ ಹೋಗಿ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಮುಕ್ತಿಗೊಳಿಸುವ ಹುನ್ನಾರ ನಡೆಸಿದ್ದರು ಎಂದು ಆರೋಪಿಸಿದರು.
ತಮಿಳುನಾಡು ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಸಾಧಿಸಲು ಇವರ ಹೇಳಿಕೆಯೇ ಕಾರಣ. ಎಂಪಿಆರ್, ಅಣ್ಣಾಮಲೈ ಅವರ ಬಗ್ಗೆ ಕನಿಷ್ಠವಾಗಿ ಮಾತನಾಡಿದ್ದಾರೆ. ಇದು ಅಲ್ಲಿನ ಚುನಾವಣೆ ಮೇಲೆ ಪ್ರಭಾವ ಬೀರಿದೆ. ಹಾಗಾಗಿ ಡಿ.31ರ ಒಳಗೆ ಅಣ್ಣಾಮಲೈ ಒಡಗೂಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಬಳಿ ಇವರನ್ನು ಉಚ್ಛಾಟಿಸುವಂತೆ ಮನವಿ ಮಾಡಲಿದ್ದೇವೆ ಎಂದು ತಿಳಿಸಿದರು.
ಈ ವೇಳೆ ಎ.ಬಿ. ಹನುಮಂತಪ್ಪ, ಎಂ.ಆರ್. ಮಹೇಶ್, ಕೆ.ವಿ. ಚನ್ನಪ್ಪ, ನೆಲಹೊನ್ನೆ ದೇವರಾಜ್, ಸಿದ್ದೇಶ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.