ದಾವಣಗೆರೆ,ಡಿ.6- ಕೃಷಿ ಬೆಳೆಗಳ ನಿರ್ವಹಣೆ ಕುರಿತು ನಗರದ ವರದಾ ಕೃಷಿಕರ ವೇದಿಕೆ ರೈತರಿಗೆ ಕೆಲವು ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಮಾಹಿತಿ ನೀಡಿದೆ.
ಕೊಟ್ಟಿಗೆ/ ಸಾವಯವ ಗೊಬ್ಬರ ಬಳಸಿಲ್ಲವೇ, ಬೀಜೋಪಚಾರ ಮಾಡುತ್ತಿಲ್ಲವೇ, ತಲೆ ಸಾಲಾಗಿ ಗೋವಿನಜೋಳ ಬೆಳೆಯುತ್ತಿಲ್ಲವೇ, ರಸ ಹೀರುವ ಕೀಟಗಳ ಸಮಗ್ರ ಹತೋಟಿಗೆ (ಬೀಜೋಪಚಾರ, ಕೊತಂಬರಿ ಬೆರೆಸಿ ಬಿತ್ತನೆ, ಅಂಟು ಬಲೆ ಬಳಕೆ, ಜೈವಿಕ ಪೀಡೆನಾಶಕ ಬಳಕೆ, ಅತಿ ರೋಗ ಬಾಧಿತ ಸಸ್ಯಗಳ ನಿರ್ಮೂಲನೆ) ಕ್ರಮ ಕೈಗೊಂಡಿಲ್ಲವೇ ? ಶೇಂಗಾ, ಸೂರ್ಯಕಾಂತಿ, ಹೆಸರು, ಉದ್ದು, ಅಲಸಂದೆ, ಕಬ್ಬು, ಮೆಣಸಿನಗಿಡ ಬೆಳೆಗಳ ಬಿತ್ತನೆ/ ನಾಟಿ ಮಾಡಬೇಡಿ.
ಇನ್ನು ಮುಂದೆ ಶೇಂಗಾ, ಸೋಯಾ ಅವರೆ ಬೆಳೆಗಳನ್ನು ಬಿತ್ತಿದರೆ ಇಳುವರಿಯಲ್ಲಿ ಗಮನಾರ್ಹ ಕಡಿತವನ್ನು, ಇತ್ತೀಚಿನ ವರ್ಷಗಳ ಅನುಭವದ ಮೂಲಕ, ಕಾಣಲಾಗಿದೆ.
ಚಳಿಗಾಲದಲ್ಲಿ ಬೆಳೆಗಳ ಇಳುವರಿಯಲ್ಲಿ ಸುಧಾರಣೆಗೆ ಪೋಷಕಾಂಶಗಳ ಸಿಂಪಡಣೆ ಅತ್ಯಗತ್ಯ. ಪೋಷಕಾಂಶಗಳ ಬಳಕೆ ಮಾತ್ರ ತೇವಾಂಶ ಲಭ್ಯತೆ ಅವಲಂಬಿಸಿರಬೇಕು.
ಹೀರೆ, ಸೌತೆಗಳಲ್ಲಿ ನೀರು ನಿರ್ವಹಣೆ ಸಮರ್ಪಕವಾಗಿ ಮಾಡುವ ಮೂಲಕ. ಕಾಯಿಗಳು ಕಹಿಯಾಗದಿರುವಂತೆ ಮಾಡಲು ಸಾಧ್ಯ.
ಬೇಸಿಗೆ ಭತ್ತದಲ್ಲಿ ಬೆರಕೆ ಭತ್ತದ ಸಮಸ್ಯೆ ನಿವಾರಿಸಲು ಸಮರ್ಪಕವಾಗಿ ಕೆಸರು ಗದ್ದೆ ನಿರ್ವಹಣೆ ಅಗತ್ಯ. ಉತ್ತಮ ಇಳುವರಿಗಾಗಿ ಸಸಿ ಮಡಿಯಲ್ಲಿ ಡಿಸೆಂಬರ್ 20 ರೊಳಗೆ ಬಿತ್ತನೆ ಅತ್ಯಗತ್ಯ. ಸಸಿ ಮಡಿಯಲ್ಲಿ ಅಂಗಮಾರಿ ರೋಗ ನಿರ್ವಹಣೆಗೆ ಸಗಣಿರಾಡಿಯ ತಿಳಿ ಸಿಂಪಡಣೆ ಅಗತ್ಯವಾಗಿದೆ.
ಇಂತಹ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ನಂಬಿಕೆಯ ತಜ್ಞರ ಸಲಹೆಯನ್ನು ಅಗತ್ಯವಾಗಿ ಪಡೆಯಬೇಕು ಎಂದು ವೇದಿಕೆಯ ಆರ್.ಜಿ ಗೊಲ್ಲರ್ ತಿಳಿಸಿದ್ದಾರೆ.