ಕೋಟ್ಯಾಂತರ ರೂ. ಮೌಲ್ಯದ ಉದ್ಯಾನವನವನ್ನು ಉಳಿಸುವಲ್ಲಿ ಯಶಸ್ವಿಯಾದ ಆವರಗೆರೆ ಗ್ರಾಮಸ್ಥರು

ದಾವಣಗೆರೆ, ಡಿ. 8- ಸಾರ್ವಜನಿಕರಿಗೆ ಮೀಸಲಾಗಿದ್ದ ಉದ್ಯಾನವನವನ್ನು ಒಡೆದು ಹಾಕಿದ್ದಲ್ಲದೇ, ಅಲ್ಲಿ ಅನಧಿಕೃತವಾಗಿ ನಿರ್ಮಿಸಲಾಗುತ್ತಿದ್ದ ವಾಣಿಜ್ಯ ಮಳಿಗೆಗಳ ಕಾಮಗಾರಿಯನ್ನು ಸ್ಥಗಿತಗೊಳಿಸುವಲ್ಲಿ ತಾವು ನಡೆಸಿದ ಹೋರಾಟಕ್ಕೆ ಜಯ ತಂದುಕೊಳ್ಳುವುದರ ಮೂಲಕ ಸರ್ಕಾರದ ಆಸ್ತಿಯನ್ನು ಉಳಿಸುವಲ್ಲಿ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ.

ನಗರಕ್ಕೆ ಹೊಂದಿಕೊಂಡಂತಿರುವ ಆವರಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕೈಗೊಂಡಿದ್ದ ಕ್ರಮವನ್ನು ಪ್ರಶ್ನಿಸಿ, ಅನೇಕ ದಿನಗಳಿಂದ ಗ್ರಾಮಸ್ಥರು ನಡೆಸಿದ ಹೋರಾಟದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯು `ಇ-ಸ್ವತ್ತು’ಅನ್ನು ಪ್ರಕಟಿಸುವುದರ ಮೂಲಕ ಸರ್ಕಾರದ ಆಸ್ತಿಯನ್ನಾಗಿ ಉಳಿಸಿದೆ.

ಗ್ರಾಮದ ಅನೇಕ ಮುಖಂಡರು ಮಾಡಿಕೊಂಡ ಮನವಿಯ ಅನ್ವಯ ಜಿಲ್ಲಾಧಿಕಾರಿ ಡಾ. ಗಂಗಾಧರಸ್ವಾಮಿ ಅವರು ಕಳೆದ ಹದಿನೈದು ದಿನಗಳ ಹಿಂದೆ ಸ್ಥಳ ಪರಿಶೀಲನೆ ನಡೆಸಿ ನೀಡಿದ ನಿರ್ದೇಶನದ ಮೇರೆಗೆ ನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ಅವರು, `ಈ ನಿವೇಶನ ಸರ್ಕಾರಕ್ಕೆ ಸೇರಿದ್ದು’ ಎನ್ನುವುದರ ಕುರಿತಂತೆ 2024, ನವೆಂಬರ್ 16ರಂದು ಇ-ಸ್ವತ್ತು ಪ್ರಕಟಿಸಿದರು.

ಹಿನ್ನೆಲೆ : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಆವರಗೆರೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪಿಬಿ ರಸ್ತೆಗೆ ಹೊಂದಿಕೊಂಡಂತಿರುವ ಉದ್ಯಾನವನವನ್ನು ರಾತ್ರೋ ರಾತ್ರಿ ಒಡೆದು ಹಾಕಿ ಅಲ್ಲಿ ಪಾಲಿಕೆಯಿಂದ ಅನುಮತಿಯನ್ನೂ ಪಡೆಯದೇ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುತ್ತಿದೆ ಎಂದು ಗ್ರಾಮಸ್ಥರು ದೂರಿದ್ದರು.

ಸಹಕಾರ ಸಂಘವು ತನಗೆ ಸೇರಿದ ಡೋರ್ ನಂಬರ್ 103ರಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸುವು ದಾಗಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮೂಲಕ ನಬಾರ್ಡ್‌ನಿಂದ 99.73 ಲಕ್ಷ ರೂ. ಸಾಲ ಮಂಜೂರು ಮಾಡಿಸಿಕೊಂಡಿತ್ತು. ಆದರೆ, ಮಳಿಗೆಗಳನ್ನು ಬೇರೊಂದು ಕಡೆ ಅಂದರೆ ಸದರಿ 103 ಡೋರ್‌ ನಂಬರ್‌ನಿಂದ ಸುಮಾರು 500 ಅಡಿ ದೂರದಲ್ಲಿರುವ ಉದ್ಯಾನವನವನ್ನು ಒಡೆದು ಅಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುತ್ತಿದೆ ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದ ದೂರಿನಲ್ಲಿ ಗ್ರಾಮಸ್ಥರು ಆರೋಪಿಸಿದ್ದರು.

ವಿವರ : ಆವರಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಆವರಗೆರೆ ಗ್ರಾಮದಲ್ಲಿರುವ ಡೋರ್ ನಂಬರ್ 103ರಲ್ಲಿ ತುಂಬಾ ವರ್ಷಗಳಿಂದ ಗೋಡೌನ್ ಹೊಂದಿದೆ. ಗೋಡೌನ್ ಶಿಥಲಾವಸ್ಥೆಯಲ್ಲಿದ್ದು, ಇದನ್ನು ನೆಲಸಮ ಮಾಡಿ ಬೃಹತ್ತಾದ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಬೇಕೆನ್ನುವ ಸದುದ್ದೇಶದಿಂದ ಈ ಗೋಡೌನ್‌ಗೆ ಹತ್ತಿರವಿರುವ ಡೋರ್ ನಂಬರ್ 292 ರಿಂದ 321 ಸಾರ್ವಜನಿಕರಿಗೆ ಮೀಸಲಾದ ಉದ್ಯಾನವನ ಇದ್ದು, ಈ ಉದ್ಯಾನವನದ ಜಾಗವೇ ಡೋರ್ ನಂಬರ್ 103 ತನಗೆ ಸಂಬಂಧಿಸಿದ್ದು ಎಂದು ಸಹಕಾರ ಸಂಘವು ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿತು. ಸೃಷ್ಟಿ ಮಾಡಿದ ದಾಖಲೆಗಳನ್ನು ಮಹಾನಗರ ಪಾಲಿಕೆಗೆ ಸಲ್ಲಿಸಿ, ಇ-ಸ್ವತ್ತು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಲ್ಲದೇ, ಇದರ ಆಧಾರದ ಮೇಲೆ ಬೆಂಗಳೂರಿನ ಸಹಕಾರ ಇಲಾಖೆಯಿಂದ ಆಡಳಿತಾತ್ಮಕ ಅನುಮೋದನೆ ಮೂಲಕ ನಬಾರ್ಡ್‌ನಿಂದ ಹಣವನ್ನು ಮಂಜೂರು ಮಾಡಿಸಿಕೊಳ್ಳುವಲ್ಲಿಯೂ ಯಶಸ್ವಿಯಾಗಿತ್ತು. ತಡಮಾಡದ ಸಹಕಾರ ಸಂಘವು ರಾತ್ರೋ-ರಾತ್ರಿ ಉದ್ಯಾನವನವನ್ನು ಒಡೆದು ಹಾಕಿದ್ದಲ್ಲದೇ ನಗರಪಾಲಿಕೆಯಿಂದ ಅನುಮತಿಯನ್ನೂ ಪಡೆಯದೆ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಕಾಮಗಾರಿಯನ್ನು ಆರಂಭಿಸಿತ್ತು.

ಈ ಎಲ್ಲಾ ವಿಷಯ ತಿಳಿದ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಸ್ಥಳ ಪರಿಶೀಲನೆ ಮಾಡಿದ ಮಹಾನಗರ ಪಾಲಿಕೆ ಆಯುಕ್ತರು, ತಾವು ನೀಡಿದ ಇ-ಸ್ವತ್ತನ್ನು ಅನೂರ್ಜಿತಗೊಳಿಸಿದ್ದಲ್ಲದೇ, ಕಾಮಗಾರಿಯನ್ನು ತಕ್ಷಣ ನಿಲ್ಲಿಸುವಂತೆ ಸಹಕಾರ ಸಂಘಕ್ಕೆ ಆದೇಶಿಸಿದ್ದರು.

ಆಯುಕ್ತರ ಕ್ರಮ ಕೈಗೊಂಡ ನಂತರವೂ ಮಳಿಗೆ ನಿರ್ಮಾಣದ ಕಾಮಗಾರಿಯನ್ನು ಮುಂದುವರಿಸಿದ್ದನ್ನು ಖಂಡಿಸಿ ಗ್ರಾಮಸ್ಥರು ಮತ್ತೆ ಆಯುಕ್ತರನ್ನು ಭೇಟಿ ಮಾಡಿ ಲಿಖಿತವಾಗಿ ಮನವಿ ಸಲ್ಲಿಸಿದ್ದಲ್ಲದೇ, ಜಿಲ್ಲಾಧಿಕಾರಿಗಳನ್ನೂ ಭೇಟಿ ಮಾಡಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದರು.

ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಖುದ್ದು ತಾವೇ ಸ್ಥಳ ಪರಿಶೀಲನೆ ನಡೆಸಿ, ಉದ್ಯಾನವನಕ್ಕೆ ಸಂಬಂಧಿಸಿದ ಮೂಲ ಡೋರ್ ನಂಬರ್‌ಗೆ  ಇ-ಸ್ವತ್ತು ಮಾಡುವಂತೆ ನೀಡಿದ ನಿರ್ದೇಶನದ ಮೇರೆಗೆ ಆಯುಕ್ತರು ಸೂಕ್ತ ಕ್ರಮ ಕೈಗೊಂಡಿದ್ದಾರೆ.

ಶಿಕ್ಷೆಗೆ ಆಗ್ರಹ : ಸಾರ್ವಜನಿಕರಿಗೆ ಮೀಸಲಾದ ಉದ್ಯಾನವನಕ್ಕೆ ಸಂಬಂಧಿಸಿದಂತೆ ಸುಳ್ಳು ದಾಖಲೆಗಳನ್ನು ಸೃಷ್ಠಿ ಮಾಡುವುದರೊಂದಿಗೆ ವಂಚಿಸಿದ ಆರೋಪದಲ್ಲಿ ಆವರಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಉದ್ಯಾನವನವನ್ನು ಧ್ವಂಸಗೊಳಿಸುವುದರೊಂದಿಗೆ ಸರ್ಕಾರದ ಹಣವನ್ನು ನಷ್ಟ ಮಾಡಿದ ಆರೋಪದಲ್ಲಿ ಅವರಿಂದ ಅಷ್ಟೂ ಹಣವನ್ನು ವಸೂಲಿ ಮಾಡಬೇಕು. ಪಾಲಿಕೆಯ ಅನುಮತಿಯನ್ನು ಪಡೆಯದೇ, ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಮುಂದಾದ ಆರೋಪದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಮದ ಹಿರಿಯ ಮುಖಂಡರೂ ಆಗಿರುವ ನ್ಯಾಯವಾದಿ ಆರ್. ಪರಮೇಶ್ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

error: Content is protected !!