ದಾವಣಗೆರೆ, ಡಿ.5- ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರಾರಂಭಿಸಿರುವ ಜ್ಞಾನಜ್ಯೋತಿ ಕಾರ್ಯಕ್ರಮದ ಪ್ರವರ್ತಕ ಉಪಕ್ರಮವಾಗಿದ್ದು, ವಿದ್ಯಾರ್ಥಿನಿಯರಲ್ಲಿ ವಿಜ್ಞಾನ ಶಿಕ್ಷಣವನ್ನು ಉತ್ತೇಜಿಸುವ ಪ್ರಾಥಮಿಕ ಗುರಿಯಾಗಿದೆ ಎಂದು ಜಿ.ಎಂ. ವಿಶ್ವವಿದ್ಯಾನಿಲಯದ ರೋಬೋಟಿಕ್ಸ್ ಮತ್ತು ಆಟೋಮೇಷನ್ ವಿಭಾಗದ ಪ್ರಾಧ್ಯಾಪಕ ಡಾ. ಜಿ.ಜಿ. ರಾಜಕುಮಾರ್ ಅವರು ತಿಳಿಸಿದರು.
ಗಾಜನೂರಿನ ಶ್ರೀ ಜವಾಹರ ನವೋದಯ ವಿದ್ಯಾಲಯದಲ್ಲಿ ವಿಜ್ಞಾನ ಜ್ಯೋತಿ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡಿದ್ದ ರೋಬೋಟಿಕ್ಸ್ ಮತ್ತು ಆಟೋಮೇಷನ್ ಕುರಿತು ಟಿಂಕರಿಂಗ್ ಕಾರ್ಯಾಗಾರವನ್ನು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಕಾರ್ಯಕ್ರಮವು ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ಕ್ಷೇತ್ರಗಳಲ್ಲಿ ಲಿಂಗ ಸಮಾನತೆಯನ್ನು ಉತ್ತೇಜಿಸುವ ಗುರಿ ಹೊಂದಿರುವ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ನೀತಿಯ ಭಾಗವಾಗಿದೆ. ಇದು ನಿರ್ದಿಷ್ಟವಾಗಿ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿನ ವಿದ್ಯಾರ್ಥಿನಿಯರನ್ನು ಗುರಿಯಾಗಿಸುತ್ತದೆ. ವೈಜ್ಞಾನಿಕ ಜ್ಞಾನ ಮತ್ತು ಸಂಪನ್ಮೂಲಗಳಿಗೆ ಒಡ್ಡಿಕೊಳ್ಳುವ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನ ದಲ್ಲಿ ವೃತ್ತಿ ಜೀವನವನ್ನು ಮುಂದುವರೆಸಲು ಅವರನ್ನು ಪ್ರೋತ್ಸಾಹಿಸುತ್ತದೆ. ಕಾರ್ಯಾಗಾರವು ಆಧುನಿಕ ವಿನ್ಯಾಸ ಮತ್ತು ಅಸೆಂಬ್ಲಿ ತಂತ್ರಜ್ಞಾನದಲ್ಲಿ ವಿದ್ಯಾರ್ಥಿಗಳ ಕೌಶಲ್ಯಗಳನ್ನು ಹೆಚ್ಚಿಸಲು ನಾವೀನ್ಯತೆ ಮತ್ತು ತಾಂತ್ರಿಕ ಪರಿಣಿತಿಯನ್ನು ಬೆಳೆಸುವ ಗುರಿಯನ್ನು ಹೊಂದಿದೆ ಎಂದರು.
ಜಿ.ಎಂ. ವಿಶ್ವವಿದ್ಯಾನಿಲಯದ ರೋಬೋಟಿಕ್ಸ್ ಮತ್ತು ಆಟೋಮೇಷನ್ ವಿಭಾಗದ ಸಹಾಯಕ ಪ್ರಾಧ್ಯಾಪಕರುಗಳಾದ ಲಿಂಗರಾಜು, ಶ್ರೀಮತಿ ಬಿ.ಎಂ. ಚೇತನ ಅವರುಗಳು ಮಾತನಾಡಿದರು.
ವಿಜ್ಞಾನ ಜ್ಯೋತಿ ಕಾರ್ಯಕ್ರಮದ ಬಗ್ಗೆ ವಿವರಿಸಿದ ವಿದ್ಯಾಲಯದ ಹಿರಿಯ ಶಿಕ್ಷಕರಾದ ಶರಣಪ್ಪ ನಾಯಕ್ ಅವರು, ವಿಜ್ಞಾನ ಜ್ಯೋತಿ ಕಾರ್ಯಕ್ರಮವು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯದಲ್ಲಿ ಹೆಣ್ಣು ಮಕ್ಕಳನ್ನು ತೊಡಗಿಸುವುದರ ಸಲುವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಸಂಯೋಜಕರಾದ ಶ್ರೀಮತಿ ರೇಖಾ ಆರ್. ಸುಲಾಖೆ ಅವರು ವಿಜ್ಞಾನ ಜ್ಯೋತಿ ಕಾರ್ಯಕ್ರಮವನ್ನು ಅವಲೋಕಿಸಿ ಮಾತನಾಡಿದರು.
10ನೇ ತರಗತಿಯ ಎಂ. ಸ್ನೇಹ ವಂದಿಸಿದರು. 11ನೇ ತರಗತಿಯ ಜೆ.ಸಿ. ಸುಂದರಿ ಮಾನ್ಯ ನಿರೂಪಿಸಿದರು.