ಚನ್ನಗಿರಿ : ಸುಪಾರಿ ಕೊಲೆಗಾರರ ಬಂಧನ

ದಾವಣಗೆರೆ, ಡಿ. 4- ಆಸ್ತಿಗಾಗಿ ಸಂಚು ರೂಪಿಸಿ ಸುಪಾರಿ ನೀಡಿ ತನ್ನ ಚಿಕ್ಕಪ್ಪನನ್ನೇ ಕೊಲೆ ಮಾಡಿಸಿದ ಆರೋಪಿತರು ಮತ್ತು ಸುಪಾರಿ ಕೊಲೆಗಾರರನ್ನು ಚನ್ನಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಲ್ಲೂರು ಭದ್ರಾ ಉಪ ನಾಲೆಯಲ್ಲಿ ನ.22 ರಂದು ಅಪರಿಚಿತ ವ್ಯಕ್ತಿಯ ಶವ ಅನುಮಾನಸ್ಪಾದ ರೀತಿಯಲ್ಲಿ ಪತ್ತೆಯಾಗಿತ್ತು. ದಾವಣಗೆರೆ ತಾಲ್ಲೂಕು ಗೋಪನಾಳ್ ಗ್ರಾಮದ ಸಿದ್ದಲಿಂಗಪ್ಪ ಎಂದು ಗುರುತಿಸಲಾಗಿತ್ತು.

ಸಿದ್ದಲಿಂಗಪ್ಪನ ಕೊಲೆಯಾಗಿರುವ ಶಂಕೆಯಿದೆ ಎಂದು ಸೊಸೆ ದೊಡ್ಡಮ್ಮ ದೂರು ನೀಡಿದ್ದರು. ಪ್ರಕರಣದ ಪತ್ತೆಗಾಗಿ ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿಗಳಾದ ಸಂತೋಷ ವಿಜಯಕುಮಾರ್, ಮಂಜುನಾಥ  ಮಾರ್ಗದರ್ಶನದಲ್ಲಿ, ಚನ್ನಗಿರಿ ಡಿವೈಎಸ್ಪಿ  ಸ್ಯಾಮ್ ವರ್ಗೀಸ್‌ರವರ ನೇತೃತ್ವದಲ್ಲಿ ಚನ್ನಗಿರಿ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಗಳ ತಂಡ ರಚನೆ ಮಾಡಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಪನಾಳ ಗ್ರಾಮದ  ಸತೀಶ, ಪ್ರಭು, ಪ್ರಶಾಂತ, ಸುಜಾತ, ಶಿವಮೂರ್ತೆಪ್ಪ ಇವರನ್ನು ವಿಚಾರಣೆಗೆ ಒಳಪಡಿಸಿದಾಗ ಆಸ್ತಿ ಹಾಗೂ ಜಾಗದ ವಿಚಾರವಾಗಿ ಸಿದ್ದಲಿಂಗಪ್ಪನನ್ನು  ಕೊಲೆ  ಮಾಡಲು 1 ಲಕ್ಷ ರೂಪಾಯಿ ಸುಪಾರಿ ನೀಡಿದ್ದು, ಅದರಂತೆ ನ.21 ರಂದು  ಸಂಜೆ ಸಿದ್ದಲಿಂಗಪ್ಪನ್ನು ಬೋರ್ ಪಾಯಿಂಟ್ ಮಾಡಿಸಬೇಕಾಗಿದೆ ಎಂದು ತೊಗಲೇರಿ ಕ್ರಾಸ್‌ನಿಂದ ಆಟೋದಲ್ಲಿ ಚನ್ನಗಿರಿ ತಾಲ್ಲೂಕು ಹೊನ್ನೆಬಾಗಿ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಸಿದ್ದಲಿಂಗಪ್ಪನನ್ನು ಟವೆಲ್ ನಿಂದ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ,  ಶವವನ್ನು ನಲ್ಲೂರು ಸಮೀಪದ ಭದ್ರಾ ಚಾನಲ್ ಗೆ ತಂದು ಶವಕ್ಕೆ ಕಲ್ಲು ಕಟ್ಟಿ ನೀರಿಗೆ ಹಾಕಿರುವುದಾಗಿ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!