ಅಕ್ರಮ ಮಣ್ಣು ಗಣಿಗಾರಿಕೆ ತಡೆಗೆ ಆಗ್ರಹಿಸಿ ಶಿರಸ್ತೇದಾರರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮನವಿ
ಹರಿಹರ,ಡಿ.4- ತಾಲ್ಲೂಕಿನ ವಿವಿಧ ಗ್ರಾಮ ಗಳ ಪಟ್ಟಾ ಹಾಗೂ ಸರ್ಕಾರಿ ಜಮೀನುಗಳಲ್ಲಿ ನಡೆಯುತ್ತಿರುವ ಅವ್ಯಾಹತ ಅಕ್ರಮ ಮಣ್ಣು ಗಣಿಗಾರಿಕೆಯನ್ನು ತಡೆಯಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಇಂದು (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಶಿರಸ್ತೇದಾರರಿಗೆ ಮನವಿ ಸಲ್ಲಿಸಿತು.
ನಂತರ ಸಂಘಟನೆಯ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ತಾಲ್ಲೂಕಿನ ಗುತ್ತೂರು, ಹರ್ಲಾಪುರ, ಸಾರಥಿ, ಪಾಮೇನಹಳ್ಳಿ, ದೀಟೂರು, ಚಿಕ್ಕಬಿದರಿ, ಕರಲಹಳ್ಳಿ, ಬುಳ್ಳಾಪುರ, ರಾಜನಹಳ್ಳಿ, ಧೂಳೆಹೊಳೆ, ಇಂಗಳಗೊಂದಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಮಣ್ಣಿನ ಗಣಿಗಾರಿಕೆ ಈ ಹಿಂದಿನ ವರ್ಷಗಳಲ್ಲಿ ಅವ್ಯಾಹತವಾಗಿ ನಡೆಸಲಾಗಿದೆ. ಅಲ್ಲದೇ ಈ ವರ್ಷವೂ ಆ ಭಾಗದಲ್ಲಿ ಗಣಿಗಾರಿಕೆಗೆ ಸಿದ್ಧತೆ ನಡೆಸಲಾಗಿದೆ.
ನದಿ ದಡದ ಈ ಗ್ರಾಮಗಳಲ್ಲಿ 20 ರಿಂದ 40 ಅಡಿಗಳ ಆಳದವರೆಗೆ ಜೆಸಿಬಿ, ಹಿಟಾಚಿಯಂತಹ ಬೃಹತ್ ಯಂತ್ರಗಳಿಂದ ಗುಂಡಿಗಳನ್ನು ತೋಡುತ್ತಾ ಅಕ್ರಮ ಮಣ್ಣು ಗಣಿಗಾರಿಕೆ ನಡೆಸಲಾಗಿದೆ. ರಾಜನಹಳ್ಳಿ ಗ್ರಾಮದಲ್ಲಿ ಅಂದಾಜು 2 ಎಕರೆಯಷ್ಟು ಸರ್ಕಾರದಿಂದ ಮಂಜೂರಾದ ಪರಿಶಿಷ್ಟ ಜನಾಂಗದವರ ರುದ್ರಭೂಮಿಯಲ್ಲೂ ಗಣಿಗಾರಿಕೆ ನಡೆಸಿ ಮೃತರ ಅಂತ್ಯ ಸಂಸ್ಕಾರ ನಡೆಸದಂತಾಗಿದೆ, ಅಲ್ಲಿನ ಪರಿಶಿಷ್ಟರು ಮೃತಪಟ್ಟರೆ ನದಿ ದಡ, ರಸ್ತೆ ಅಕ್ಕಪಕ್ಕವೇ ಅಂತ್ಯ ಸಂಸ್ಕಾರ ಮಾಡುವ ದುಸ್ಥಿತಿ ಇದೆ.
3 ಅಡಿಗಿಂತ ಹೆಚ್ಚು ಮಣ್ಣನ್ನು ತೆಗೆದರೆ ಅಂತಹ ಪಟ್ಟಾ ಜಮೀನುಗಳನ್ನು ಸರ್ಕಾರ ತನ್ನ ಸುಪರ್ದಿಗೆ ಪಡೆಯಲು ಅವಕಾಶವಿದ್ದರೂ ತಾಲ್ಲೂಕು, ಜಿಲ್ಲಾಡಳಿತ, ಪರಿಸರ ಮತ್ತು ಕೃಷಿ ಇಲಾಖೆಗಳು ಕಣ್ಣು ಮುಚ್ಚಿ ಕುಳಿತಿವೆ.
ಮಣ್ಣು ಗಣಿಗಾರಿಕೆ ಆರಂಭಿಸಲು ಪಟ್ಟ ಭದ್ರರು ಈಗಾಗಲೇ ವಿವಿಧ ಪಕ್ಷಗಳ ಜನಪ್ರತಿ ನಿಧಿಗಳು, ಮುಖಂಡರು, ಅಧಿಕಾರಿಗಳನ್ನು ಸಂಪರ್ಕಿಸಿ ವ್ಯಾಪಾರ ಕುದುರಿಸುತ್ತಿದ್ದಾರೆ. ಈ ವರ್ಷವೂ ಗಣಿಗಾರಿಕೆಗೆ ಅವಕಾಶ ನೀಡಿದರೆ ತಾಲ್ಲೂಕಿನ ಭೌಗೋಳಿಕ ರಚನೆ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತದೆ.
ಒಂದು ಜಮೀನಿನ ರೈತ ತನ್ನ ಜಮೀನಿನ ಮಣ್ಣನ್ನು ಮಾರಿಕೊಂಡು 20 ಅಡಿ ಗುಂಡಿ ಸೃಷ್ಟಿಸಿದರೆ ಪಕ್ಕದ ಜಮೀನಿನ ಬಡ ರೈತನಿಗೆ ಕೃಷಿ ಕಾಯಕ ನಡೆಸಲು ಹೇಗೆ ಸಾಧ್ಯವಾಗುತ್ತದೆ. ಇದು ತಾಲ್ಲೂಕಿನ ನದಿ ದಡದ ಜೈವಿಕ, ಭೌಗೋಳಿಕ ಸ್ಥಿತಿಗಳನ್ನು ಏರುಪೇರು ಮಾಡುವ ಅಪಾಯವಿದೆ.
ಈವರೆಗೆ ನಡೆದಿರುವ ಅಕ್ರಮ ಗಣಿಗಾರಿಕೆ ಗಮನಿಸಿದರೆ ಹರಿಹರವು ರಿಪಬ್ಲಿಕ್ ಆಫ್ ಬಳ್ಳಾರಿಯಂತೆ ತಪ್ಪು ಹೆಜ್ಜೆಯತ್ತ ಸಾಗುತ್ತಿದೆಯೇ ಎಂಬ ದಟ್ಟ ಅನುಮಾನ ಮೂಡುತ್ತಿದೆ. ಕೂಡಲೇ ರಾಜ್ಯ ಸರ್ಕಾರವು ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳ ಬೇಕೆಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಸಾಕಮ್ಮ, ಬಸವರಾಜಪ್ಪ, ಸಂಜೀವ್, ಸುನೀತಾ, ಶೈಲು, ಅಣ್ಣಪ್ಪ, ರೇಣುಕಮ್ಮ, ಬಸವರಾಜ್, ಹರೀಶ್, ಶಿವಣ್ಣ, ಹನುಮಂತಪ್ಪ, ಹಾಲಮ್ಮ, ಮುಬೀನಾ, ವೀರೇಶ್, ಸಂತೋಷ, ಪರಮೇಶ್, ನಾಗಪ್ಪ, ನಾಗರಾಜ್, ಮಂಜು, ನೀಲಪ್ಪ, ಹಾಲಮ್ಮ, ಲಕ್ಷ್ಮಣರೆಡ್ಡಿ ಇದ್ದರು.