ಮುಖ್ಯ ಶಿಕ್ಷಕ ಸಿದ್ದಪ್ಪ ನಿವೃತ್ತಿ – ಬೀಳ್ಕೊಡುಗೆ ವಿದ್ಯಾರ್ಥಿನಿಯರಿಂದ ಪೂರ್ಣಕುಂಭ ಸ್ವಾಗತ

ಮುಖ್ಯ ಶಿಕ್ಷಕ ಸಿದ್ದಪ್ಪ ನಿವೃತ್ತಿ – ಬೀಳ್ಕೊಡುಗೆ  ವಿದ್ಯಾರ್ಥಿನಿಯರಿಂದ ಪೂರ್ಣಕುಂಭ ಸ್ವಾಗತ

ಹರಿಹರ, ಡಿ.4- ನಗರದ ಹೊರವಲಯದ ಗುತ್ತೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಟಿ.ಸಿದ್ದಪ್ಪನವರು ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭವು ಸಡಗರ, ಸಂಭ್ರಮದಿಂದ ನಡೆಯಿತು.

ವಿದ್ಯಾರ್ಥಿನಿಯರು ಮುಖ್ಯ ಶಿಕ್ಷಕ ಸಿದ್ದಪ್ಪ ಅವರ ಪತ್ನಿ ಅನಸೂಯ ಎಸ್. ಹಾಗೂ ಅವರ ಕುಟುಂಬದವರನ್ನು ಪೂರ್ಣಕುಂಭ ದೊಂದಿಗೆ ಸ್ವಾಗತಿಸಿ, ಸಮಾರಂಭದ ವೇದಿಕೆಗೆ ಕರೆ ತರಲಾಯಿತು. ನಂತರ ಅವರ ಕುಟುಂಬದವರಿಗೆ ಶಾಲು ಹೊದಿಸಿ ನೆನಪಿನ ಕಾಣಿಕೆಗಳನ್ನು ನೀಡಿ ಶುಭ ಕೋರಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಡಿ. ದುರುಗಪ್ಪ ಮಾತನಾಡಿ, ಸರ್ಕಾರಿ ನೌಕರರು ಸೇವೆ ಮಾಡಿ ನಿವೃತ್ತರಾಗುವುದು ಸಹಜ, ಕೆಲವು ಸಿಬ್ಬಂದಿ ನಿವೃತ್ತರಾದರೆ ಆ ವ್ಯಕ್ತಿ ಮೊದಲು ತೊಲಗಲಿ ಎಂಬ ಭಾವನೆ ಇರುತ್ತದೆ. ಆದರೆ, ಈ ಶಾಲೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರೆಲ್ಲರೂ ಸೇರಿ ಭಾಗವಹಿಸಿರುವುದನ್ನು ನೋಡಿದರೆ ಸಿದ್ದಪ್ಪನವರು ಇಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ದ್ದಾರೆಂಬುದು ದೃಢವಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಹಾಲೇಶ್‍ಗೌಡ್ರು ಮಾತನಾಡಿ, ಗುತ್ತೂರು ಪ್ರೌಢಶಾಲೆಯ ಶೈಕ್ಷಣಿಕ ಸಾಧನೆ ಉತ್ತಮವಾಗಿದ್ದು ಇದಕ್ಕೆ ಈ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯವರ ಶ್ರಮವೇ ಕಾರಣವಾಗಿದೆ ಎಂದರು.

ಸಾಮಾಜಿಕ ಕಾರ್ಯಕರ್ತ ಐರಣಿ ಹನುಮಂತಪ್ಪ ಮಾತನಾಡಿ, ಗುತ್ತೂರು ಹಾಗೂ ಅಕ್ಕಪಕ್ಕದ ವಸತಿ ಪ್ರದೇಶಗಳಲ್ಲಿನ ಬಡ ವರ್ಗದವರ ಮಕ್ಕಳೇ ಈ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಬಹಳಷ್ಟು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುತ್ತದೆ. ಆದರೆ ಈ ಶಾಲೆಯಲ್ಲಿ 250 ವಿದ್ಯಾರ್ಥಿಗಳಿರುವುದು ಶಾಲೆಯ ಶಿಕ್ಷಕರ ಶ್ರಮವನ್ನು ಬಿಂಬಿಸುತ್ತದೆ ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗರಾಜ್, ಮಾಜಿ ಅಧ್ಯಕ್ಷ ಕರಿಬಸಪ್ಪ, ಸದಸ್ಯರಾದ ಪ್ರತಿಭಾ, ಹನುಮಂತಪ್ಪ, ಮುಖ್ಯ ಅಂಚೆ ಪಾಲಕ ಶ್ರೀನಿವಾಸ್‍ರಾವ್, ನಿವೃತ್ತ ತಹಶೀಲ್ದಾರ್ ಅನಂತರಾಮ ಶ್ರೇಷ್ಠಿ, ನಿವೃತ್ತ ಮುಖ್ಯ ಶಿಕ್ಷಕ ಉಮೇಶ್, ಶಿಕ್ಷಕರಾದ ಶ್ರೀಧರ್ ಮಯ್ಯ, ರವೀಂದ್ರ ಎಚ್., ನಾಗರಾಜ್ ಟಿ., ಮಂಜುನಾಥ್ ಆಡಿನ್, ರೀನಾ ಎನ್.ಎಂ., ಸರಸ್ವತಿ, ಸೌಭಾಗ್ಯ, ಶೋಭಾ ನಂದಾ, ಆರುಂಧತಿ ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!