ದಾವಣಗೆರೆ, ಡಿ.2- ಇಲ್ಲಿನ ಜೆ.ಎಚ್. ಪಟೇಲ್ ಬಡಾವಣೆಗೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಬಡಾವಣೆಯ ನಾಗರಿಕ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಹೆಬ್ಬಾಳು ಎಂ.ಆರ್. ರಾಜಯೋಗಿ, ಬಡಾವಣೆಯಾಗಿ 30 ವರ್ಷಗಳಾಗಿವೆ. ನಾವೆಲ್ಲಾ 8 ವರ್ಷಗಳಿಂದ ವಾಸ ಮಾಡುತ್ತಿದ್ದೇವೆ. ಆದರೆ ಇಲ್ಲಿಯವರೆಗೂ ಬಡಾವಣೆ ಅಭಿವೃದ್ಧಿ ಹೊಂದಿಲ್ಲ ಎಂದು ಆಪಾದಿಸಿದರು.
ಬಡಾವಣೆಯ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಖಾಲಿ ನಿವೇಶನಗಳಲ್ಲಿ ಗಿಡಗಂಟೆ, ಮುಳ್ಳಿನ ಗಿಡಗಳು ಬೆಳೆದಿರುವುದರಿಂದ ಹುಳು, ಹುಪ್ಪಡಿಗಳು ಹೆಚ್ಚಾಗಿರುವುದರಿಂದ ಮಕ್ಕಳು ಮನೆಯಿಂದ ಹೊರ ಬರಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ವಿದ್ಯುತ್ ಕಂಬಗಳಲ್ಲಿ ಅಳವಡಿಸಿರುವ ಸ್ವಿಚ್ ಬೋರ್ಡ್ಗಳು ಕಿತ್ತು ಹೋಗಿವೆ. ಅಲ್ಲದೇ, ಬೀದಿ ದೀಪಗಳು ಹಾಳಾಗಿವೆ. ಹಾಗಾಗಿ, ಮಹಿಳೆಯರು ಕತ್ತಲಿನಲ್ಲಿ ಓಡಾಡುವುದು ಕಷ್ಟವಾಗಿದೆ. ಖಾಲಿ ನಿವೇಶನಗಳು ಅನೈತಿಕ ಚಟುವಟಿಕೆಯ ತಾಣಗಳಾಗಿ ಮಾರ್ಪಟ್ಟಿವೆ. ನಿರ್ವಹಣೆಯ ಕೊರತೆಯಿಂದ ಇಲ್ಲಿನ ಆರು ಉದ್ಯಾನಗಳು ಅದ್ವಾನವಾಗಿದ್ದು, ಗೇಟ್ಗಳು ಮುರಿದಿವೆ. ಚರಂಡಿಗಳು ಕಸ, ಕಡ್ಡಿಗಳಿಂದ ತುಂಬಿಕೊಂಡು, ಸೊಳ್ಳೆ ಉತ್ಪತ್ತಿ ತಾಣಗಳಾಗಿ ಮಾರ್ಪಟ್ಟಿರುವುದರಿಂದ ಸಾರ್ವಜನಿಕರು ನಾನಾ ಸಾಂಕ್ರಾಮಿಕ ಕಾಯಿಲೆಗಳ ಭಯದಲ್ಲಿ ಬದುಕುವಂತಾಗಿದೆ ಎಂದು ದೂರಿದರು.
ಬಡಾವಣೆ ಈಗಾಗಲೇ ಪಾಲಿಕೆಗೆ ಹಸ್ತಾಂತರ ವಾಗಿದ್ದು, ಮನೆ ಕಂದಾಯ, ಡೋರ್ ನಂಬರ್ ಶುಲ್ಕ ಕಟ್ಟಿಸಿಕೊಂಡಿರುವ ಪಾಲಿಕೆ ಅಧಿಕಾರಿಗಳು, ಮೂಲಭೂತ ಸೌಲಭ್ಯ ಕಲ್ಪಿಸದೇ ಸಾರ್ವಜನಿಕರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಈಗಲಾದರೂ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಗಳು ಎಚ್ಚೆತ್ತುಕೊಂಡು ಹಾಳಾಗಿರುವ ರಸ್ತೆಗಳನ್ನು ದುರಸ್ತಿ ಪಡಿಸಬೇಕು, ಬೀದಿ ದೀಪ ಅಳವಡಿಸಬೇಕು. ಉದ್ಯಾನವನ ನಿರ್ವಹಣೆಗೆ ಸಿಬ್ಬಂದಿ ನೇಮಿಸಬೇಕು. ನಗರ ಸಾರಿಗೆ ಬಸ್ ಸೇವೆಯನ್ನು ವಿಸ್ತರಿಸಬೇಕು. ಚರಂಡಿಗಳಲ್ಲಿ ತುಂಬಿರುವ ಹೂಳು ತೆಗಿಸಿ, ಅಗತ್ಯವಿರುವ ಕಡೆಗಳಲ್ಲಿ ವೈಜ್ಞಾನಿಕವಾಗಿ ಚರಂಡಿ ಮತ್ತು ಯುಜಿಡಿ ನಿರ್ಮಿಸಬೇಕು. ಸರ್ಕಾರಿ ಶಾಲೆ, ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಹಾಗೂ ಅನೈತಿಕ ಚಟುವಟಿಕೆಗಳನ್ನು ತಡೆಯಲು ಪೊಲೀಸ್ ಉಪ ಠಾಣೆ ಆರಂಭಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಾಗರಿಕ ಹಿತರಕ್ಷಣಾ ಸಮಿತಿಯ ಕೆ.ಎಚ್. ಹನುಮಂತಪ್ಪ, ವಿ.ಗಣೇಶ್, ತಿರುಮಲೇಶ್, ಟಿ. ಗುರುಮೂರ್ತಿ, ಜಗದೀಶ್ ರೆಡ್ಡಿ, ವಸಂತಕುಮಾರ್ ಮತ್ತಿತರರಿದ್ದರು.