`ಸಮಾನ ಕೆಲಸಕ್ಕೆ ಸಮಾನ ವೇತನ’ ಜಾರಿಗೊಳಿಸಲು ಆಗ್ರಹ

`ಸಮಾನ ಕೆಲಸಕ್ಕೆ ಸಮಾನ ವೇತನ’ ಜಾರಿಗೊಳಿಸಲು ಆಗ್ರಹ

ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ (ಎಲ್‌ಸಿಆರ್‌ಪಿ) ಸಖಿಯರ ಮಹಾ ಒಕ್ಕೂಟದಿಂದ ಪ್ರತಿಭಟನೆ

ದಾವಣಗೆರೆ, ಡಿ.2- 2024ರ ಸೆಪ್ಟೆಂಬರ್‌ 2ರಂದು ಹೊರಡಿಸಿರುವ ಗ್ರೇಡ್ ಆಧಾರಿತ ಗೌರವ ಧನ ನೀಡಿಕೆ ಆದೇಶವನ್ನು ಸರ್ಕಾರ ಹಿಂಪಡೆದು, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸುವುದೂ ಸೇರಿದಂತೆ, ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ರಾಜ್ಯ ಗ್ರಾ.ಪಂ ಮಟ್ಟದ ಮುಖ್ಯ ಪುಸ್ತಕ ಬರಹಗಾರರು (ಎಂಬಿಕೆ) ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ (ಎಲ್‌ಸಿಆರ್‌ಪಿ) ಸಖಿಯರ ಮಹಾ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಿನ್ನೆ ಪ್ರತಿಭಟನೆ ನಡೆಸಿದರು.

ಈ ವೇಳೆ ಸಂಘಟನೆಯ ಜಿಲ್ಲಾಧ್ಯಕ್ಷರಾದ ಎ. ಸುಶೀಲ ಮಾತನಾಡಿ, ಸರ್ಕಾರಿ ನೌಕರರಿಗೆ ಒದಗಿ ಸಿರುವ ಮಾದರಿಯಲ್ಲಿ ನಮಗೂ ಸೇವಾ ಭದ್ರತೆ ಒದಗಿಸಬೇಕು ಮತ್ತು ಸೇವಾ ಭದ್ರತೆ, ಇಎಸ್‌ಐ, ಪಿಎಫ್ ನೀಡಬೇಕೆಂದು ಒತ್ತಾಯಿಸಿದರು.

ಮೇಲಾಧಿಕಾರಿಗಳಿಂದ ಸಿಬ್ಬಂದಿಗೆ ಆಗುವ ಮಾನಸಿಕ ಕಿರುಕುಳ ನಿಲ್ಲಿಸಬೇಕು, ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಿಗೆ (ಎಂಬಿಕೆ) ಪ್ರಸ್ತುತ ಇರುವ 5 ಸಾವಿರ ರೂ ಗೌರವ ಧನವನ್ನು 20 ಸಾವಿರ ರೂಗೆ ಹಾಗೂ ಸ್ಥಳೀಯ ಸಂಪನ್ಮೂಲ ವ್ಯಕ್ತಿ (ಎಲ್‌ಸಿಆರ್‌ಪಿ) ಗಳಿಗೆ 2500 ರೂ ಬದಲಿಗೆ 15 ಸಾವಿರ ರೂಪಾಯಿ ಗೌರವ ಧನ ನಿಗದಿ ಪಡಿಸಬೇಕೆಂದು ಆಗ್ರಹಿಸಿದರು.

ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದ ಸಖಿಯರುಗಳಿಗೂ 15 ಸಾವಿರ ರೂಪಾಯಿ ಗೌರವ ಧನ ನಿಗದಿಪಡಿಸಬೇಕು, ವೇತನ ಸಹಿತ ಹೆರಿಗೆ ರಜೆ ಮಂಜೂರು ಮಾಡಬೇಕು, ಕರ್ತವ್ಯದಲ್ಲಿದ್ದ ವೇಳೆ ಮರಣ ಹೊಂದಿದ ಎಂಬಿಕೆ, ಎಲ್‌ಸಿಆರ್‌ಪಿ, ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದ ಪಶು ಸಖಿ, ಕೃಷಿ ಸಖಿಯರ ಕುಟುಂಬಗಳಿಗೆ 3 ಲಕ್ಷ ರೂ ಪರಿಹಾರ ನೀಡಬೇಕು ಎಂದರು.

ಸರ್ಕಾರದಿಂದಲೇ ನೇರವಾಗಿ ಮುಖ್ಯ ಪುಸ್ತಕ ಬರಹಗಾರರುಗಳಿಗೆ ಹಾಗೂ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳ ಖಾತೆಗೆ ವೇತನ ಜಮೆಯಾಗಬೇಕು ಹಾಗೂ ಇಎಸ್‌ಐ, ಪಿಎಫ್ ಸೌಲಭ್ಯಗಳನ್ನು ನೀಡಬೇಕು ಮತ್ತು ಸರ್ಕಾರದ ಇತರೆ ಇಲಾಖೆಗಳ ಯಾವುದೇ ಕೆಲಸಗಳನ್ನು ನಿಯೋಜಿಸಬಾರದು. ಈ ಮೂಲಕ ಗುಣಮಟ್ಟದ ಸೇವೆ ನೀಡಲು ಪ್ರೇರಣೆ ನೀಡಬೇಕೆಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಲೋಕೇಶ್ ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಸುರೇಶ್ ನಾಯ್ಕ, ಸಖಿಯರ ಮಹಾ ಒಕ್ಕೂಟದ ತಾಲ್ಲೂಕು ಅಧ್ಯಕ್ಷೆ ಉದಯಭಾಸ್ಕರಿ, ಅಂಬಿಕಾ, ಉಮಾದೇವಿ, ನೇತ್ರಾವತಿ, ಪ್ರಿಯಾಂಕಾ, ಶಾಂತಲಾ, ನಳಿನಮ್ಮ, ಸುಧಾ, ಶಶಿಕಲಾ ಗೋಣಿವಾಡ, ಲತಾ ನಲ್ಕುಂದ, ಎಲಿಜೆಬೆತ್ ಕೈದಾಳೆ, ಹುಚ್ಚವ್ವನಹಳ್ಳಿ ರೇಖಾ, ಬಸಮ್ಮ ದೇವರ ಬೆಳಕೆರೆ ಇತರರು ಇದ್ದರು.

error: Content is protected !!