ದಾವಣಗೆರೆ,ಡಿ.2- `ಫೆಂಗಲ್’ ಚಂಡಮಾರುತದ ಹಿನ್ನೆಲೆಯಲ್ಲಿ ಮಧ್ಯಂತರ ಬೆಳೆ ನಿರ್ವಹಣಾ ಕ್ರಮಗಳ ಕುರಿತಂತೆ ನಗರದ ವರದಾ ಕೃಷಿಕರ ವೇದಿಕೆಯು ರೈತರಿಗೆ ಹಲವಾರು ಸಲಹೆಗಳನ್ನು ನೀಡಿದೆ.
* ಮಳೆಯಾದರೆ, ಹಿಂಗಾರಿ ಜೋಳ, ಗೋವಿನಜೋಳ, ಕಡಲೆ, ಗೋಧಿ, ಕುಸುಬೆ, ಅವರೆ ಬೆಳೆಗಳಲ್ಲಿ ಪೋಷಕಾಂಶ ಸಿಂಪಡಣೆ ಮಾಡಬೇಕು.
* ಮಳೆಯ ಪ್ರಮಾಣ ಮತ್ತು ಬೆಳೆಯ ಹಂತ ಪರಿಗಣಿಸಿ 2-5 ಗ್ರಾಂ 13:0:45, 2-5 ಗ್ರಾಂ 19 ಆಲ್, 3-4 ಮಿಲೀ ಸಮೃದ್ಧಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿದ ದ್ರಾವಣವನ್ನು ಸಿಂಪಡಣೆ ಮಾಡಬೇಕು.
* ಜೋಳದಲ್ಲಿ ಸುಳಿ ತಿಗಣೆ, ತೊಗರಿ, ಕಡಲೆಯಲ್ಲಿ ಕಾಯಿ ಕೊರಕ, ಕುಸುಬೆಯಲ್ಲಿ ಹೇನು ಬಾಧೆ ಹೆಚ್ಚಾಗಬಹುದು. ಅಗತ್ಯ ಸಸ್ಯ ಸಂರಕ್ಷಣಾ ಕ್ರಮ ಕೈಗೊಳ್ಳಬೇಕು.
* ಕಡಲೆ, ಕುಸುಬೆ, ಗೋಧಿ, ಅವರೆ ಗಳಲ್ಲಿ ಬುಡ ಕೊಳೆ ರೋಗ ಬಾಧೆ ಸಹ ಕಂಡು ಬಂದರೆ, ಕಾರ್ಬೆಂಡೈಜಿಂ ಬೆರೆಸಿದ ದ್ರಾವಣವನ್ನು ಬಾಧಿತ ಪ್ರದೇಶದ ಬೆಳೆಯ ಬುಡಕ್ಕೆ ಸುರಿಯ ಬೇಕು.
* ಹದ ದೊರೆತಾಗ ಎಡೆ ಹೊಡೆದು ಎರೆ ಬೀಡು ಸೆಳೆಯದಂತೆ ಮಾಡಲು ಮುಂಜಾಗ್ರತಾ ಕ್ರಮ ಅಗತ್ಯ.
* ಮುಂಗಾರಿ ಬೆಳೆಗಳ ಕಟಾವಿನ ನಂತರ ರೋಟಾವೇಟರ್/ ನೇಗಿಲು ಬಳಸಿ ಮಾಗಿ ಉಳುಮೆ ಮಾಡಬಹುದು.
* ಈಗಿನ ಮಳೆಯಿಂದ ಹಿಂಗಾರಿ ಬೆಳೆಗಳ, ಅದರಲ್ಲೂ ತಡವಾಗಿ ಬಿತ್ತಿದ ಬೆಳೆಗಳಲ್ಲಿ ಪೋಷಕಾಂಶ/ ಅಗತ್ಯವಿದ್ದಲ್ಲಿ ಪೀಡೆನಾಶಕ ಸಿಂಪಡಣೆ ಮೂಲಕ ಇಳುವರಿ ಹೆಚ್ಚಿಸಲು ಇದೊಂದು ಅನಿರೀಕ್ಷಿತ ಅವಕಾಶ.