ಜಗಳೂರಿನ ಶಾಸಕ ದೇವೇಂದ್ರಪ್ಪ ಕರೆ
ಜಗಳೂರು, ಡಿ. 2 – ಗುಣಮಟ್ಟದ ಕಲಿಕೆಗೆ ಸರ್ಕಾರ ಅನುಷ್ಟಾನಗೊಳಿಸಿರುವ ಯೋಜನೆ ಗಳನ್ನು ಸಾಕಾರ ಗೊಳಿಸಲು ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಶಾಸಕ ಬಿ. ದೇವೇಂದ್ರಪ್ಪ ಸಲಹೆ ನೀಡಿದರು.
ಸೋಮವಾರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ಜೀವಂತ ಸುಂದರ ಮೂರ್ತಿಗಳನ್ನಾಗಿಸುವ ಶಿಲ್ಪಿಗಳಿದ್ದಂತೆ ಎಂದು ಬಣ್ಣಿಸಿದ ಅವರು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಕಲಿಸಬೇಕು.ಮಹಾನ್ ದಾರ್ಶನಿಕರ ಆದರ್ಶ ಗಳನ್ನು ಮನವರಿಕೆ ಮಾಡಬೇಕು ಎಂದರು. ಪೋಷಕರು ಮಕ್ಕಳನ್ನು ಟಿವಿ, ಮೊಬೈಲ್‌ಗಳಿಂದ ದೂರವಿಟ್ಟು ಪುಸ್ತಕದ ಜ್ಞಾನ ಭಂಡಾರ ತೆರೆಯ ಬೇಕು. ನಾನು ಪ್ರಾಥಮಿಕ ಶಾಲೆಯಲ್ಲಿ ಗುರುಗಳಿಂದ ಕಲಿತ ಧಾರ್ಮಿಕ ಪಠಣ, ಸಂಸ್ಕೃತ ಶ್ಲೋಕ, ವಚನಗಳನ್ನು ಇಂದಿಗೂ ಮೈಗೂಡಿಸಿಕೊಂಡಿರುವೆ ಎಂದರು.
ಬಿಇಓ ಹಾಲಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ,ರಾಜ್ಯ ಸರ್ಕಾರದ ಆದೇಶದಂತೆ 2001 ರಲ್ಲಿ ರಾಜ್ಯವ್ಯಾಪಿ ಜಾರಿಗೊಳಿಸಿದ ಪ್ರತಿಭಾ ಕಾರಂಜಿ ಶಾಲಾ ಮಕ್ಕಳ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಸೂಕ್ತ ವೇದಿಕೆಯಾಗಿದೆ. ಜಿಲ್ಲಾ, ರಾಜ್ಯ ಮಟ್ಟದಲ್ಲಿ ಮಕ್ಕಳು ವಿಜೇತರಾಗಿ ತಾಲ್ಲೂಕಿಗೆ ಕೀರ್ತಿ ತರಬೇಕು ಎಂದರು.
ಪ.ಪಂ. ಅಧ್ಯಕ್ಷ ನವೀನ್ ಕುಮಾರ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎ.ಎಲ್. ತಿಪ್ಪೇಸ್ವಾಮಿ, ಖಜಾಂಚಿ ವೀರೇಶ್, ಕಾರ್ಯದರ್ಶಿ ಕಲ್ಲಿನಾಥ್, ಪ.ಪಂ. ಸದಸ್ಯ ಶಕೀಲ್, ಡಯಟ್ ಅಭಿವೃದ್ದಿ ನಿರ್ದೇಶಕಿ ಗೀತಾ, ಸಾಹಿತಿ ಎನ್.ಟಿ. ಎರ್ರಿಸ್ವಾಮಿ, ಬಿ.ಆರ್.ಸಿ. ಡಿಡಿ ಹಾಲಪ್ಪ, ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ಸುರೇಶ್ ರೆಡ್ಡಿ, ಅಕ್ಷರ ದಾಸೋಹ ಇಲಾಖೆ ಅಧಿಕಾರಿ ಮಂಜಣ್ಣ, ಮುಖಂಡ ಪಲ್ಲಾಗಟ್ಟೆ ಶೇಖರಪ್ಪ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.