ಚನ್ನಗಿರಿ ತಾಲ್ಲೂಕು ಕಸಾಪ ಸೇವೆಗೆ ಶಾಸಕರ ಶ್ಲ್ಯಾಘನೆ

ಚನ್ನಗಿರಿ ತಾಲ್ಲೂಕು ಕಸಾಪ ಸೇವೆಗೆ ಶಾಸಕರ ಶ್ಲ್ಯಾಘನೆ

ಚನ್ನಗಿರಿ, ಡಿ.1- ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಇಡೀ ನವೆಂಬರ್ ತಿಂಗಳಿನಲ್ಲಿ ತಾಲ್ಲೂಕಿನ ಆಯ್ದ 18 ಪ್ರೌಢ ಶಾಲೆಗಳಲ್ಲಿ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು `ಶಾಲಾ ಅಂಗಳದಲ್ಲಿ ನುಡಿ ತೋರಣ’  ಎಂಬ ವಿಷಯಾಧಾರಿತವಾದ ವಿನೂತನ ಕಾರ್ಯಕ್ರಮವನ್ನು ಸಂಘಟಿಸಿ ಯಶಸ್ವಿಗೊಳಿಸಿರುವುದು ಶ್ಲಾಘನೀಯ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ತಿಳಿಸಿದರು.

ಅವರು ಚನ್ನಗಿರಿ ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ನುಡಿ ತೋರಣ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಒಂದೇ ನಾಣ್ಯದ ಎರಡು ಮುಖಗಳಂತಿ ರುವ ಕನ್ನಡ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಗಳು ಸಮಾಜ ವನ್ನು ಸರಿದಾರಿಗೆ ಕೊಂಡೊಯ್ಯುವ ಮುಖವಾಣಿ ಗಳಿದ್ದಂತೆ. ಕ್ಷೇತ್ರದ ಪ್ರಗತಿಯ  ಆದ್ಯತೆಯ ವಲಯಗಳಲ್ಲಿ ಇವೆರಡಕ್ಕೂ ಪ್ರಥಮ ಪ್ರಾಶಸ್ತ್ಯ ನೀಡಲಾಗುವುದು. ತಾ|| ಕಸಾಪ ಘಟಕದಿಂದ ಸಂತೆಬೆನ್ನೂರು ಗ್ರಾಮ ದಲ್ಲಿ ಆಯೋಜಿಸಲು ಉದ್ದೇಶಿಸಿರುವ ಚನ್ನಗಿರಿ ತಾಲ್ಲೂಕು 17 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಶಾಸಕರು ತಿಳಿಸಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಲ್.ಜಿ. ಮಧುಕುಮಾರ್ ಮಾತನಾಡಿ, ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 25 ಕೋಟಿ ರೂ.ಗಳನ್ನು ನೀಡುವುದರ ಜೊತೆಗೆ ಬೆಳಗಾವಿಯ ಚಳಿಗಾಲದ ಅಧಿವೇಶನದ ಅವಧಿಯನ್ನು ಸಮ್ಮೇಳನದ ದೃಷ್ಟಿಯಿಂದ ಒಂದು ದಿನ ಮೊಟಕುಗೊಳಿಸಿದ ಸರ್ಕಾರದ ನಡೆಯು ಕನ್ನಡದ ಸಾರಸ್ವತ ಲೋಕದ ಮೇಲಿನ  ಕಾಳಜಿಯನ್ನು ತೋರಿಸುತ್ತದೆ  ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ ಮಾತನಾಡಿ, ಶಾಲಾ ಮಕ್ಕಳಲ್ಲಿ ನಾಡು ನುಡಿಯ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಅವರ ಶೈಕ್ಷಣಿಕ ವಿಕಾಸಕ್ಕೆ ಪೂರಕವಾಗುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಿಗೆ ಇಲಾಖೆಯ ಸಂಪೂರ್ಣ ಸಹಕಾರವಿರುತ್ತದೆ ಎಂದರು. ಸಂತೆಬೆನ್ನೂರು ಮಾರುತಿ ಉಪನ್ಯಾಸ ನೀಡಿದರು. 

ಮುಖ್ಯ ಅತಿಥಿಗಳಾಗಿ ಪುರಸಭೆ ಸದಸ್ಯ ಶ್ರೀಕಾಂತ್, ಎಸ್‌ಡಿಎಂಸಿ ಅಧ್ಯಕ್ಷ ಹೆಚ್.ಸಿ. ವೆಂಕಟೇಶ್, ಬಿಆರ್‌ಸಿ ಡಾ. ಎಸ್. ಶಂಕರಪ್ಪ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಬಿ.ಜಿ. ಸದಾಶಿವಪ್ಪ, ಮುಖ್ಯಶಿಕ್ಷಕ ಹೆಚ್.ಎಂ.ಬಸವರಾಜಪ್ಪ, ತಾ.ಸರ್ಕಾರಿ ನೌಕರರ ಸಂಘದ ಬಿ.ಎಸ್.ಗಣೇಶ್, ನಾಗರಾಜ್, ಶಾಕೀರ್ ಅಹಮದ್, ಪ್ರೌಢಶಾಲೆ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಪಿ.ವಿ.ಸ್ವಾಮಿ, ಸಹಶಿಕ್ಷಕರ ಸಂಘದ ಅಧ್ಯಕ್ಷ ಜಯಪ್ರಕಾಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಸಿ.ಗುರುಮೂರ್ತಿ, ಕನ್ನಡ ಭಾಷಾ ಶಿಕ್ಷಕರ ಬಳಗದ ಅಧ್ಯಕ್ಷ ಶಿವಕುಮಾರಸ್ವಾಮಿ, ಸಂಚಾಲಕ ನಾಗೇಶನಾಯ್ಕ್ ಮತ್ತಿತರರು ಇದ್ದರು.

error: Content is protected !!