ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿದ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ
ದಾವಣಗೆರೆ, ನ.27- ಪ್ರತಿದಿನದ ಕಾರ್ಯದಲ್ಲಿ ಮನೋಸ್ಥೈರ್ಯ, ಆತ್ಮಬಲ ಬರಬೇಕಾದರೆ ಕ್ರೀಡೆಗಳು ಹಾಗೂ ದೈಹಿಕ ಚಟುವಟಿಕೆ ಅತ್ಯಂತ ಅವಶ್ಯಕವಾಗಿವೆ ಎಂದು ಜಿಲ್ಲಾಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಆರಂಭವಾದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮೆಲ್ಲರ ಚಿಂತನಾಶೀಲತೆ ಮತ್ತು ಕ್ರಿಯಾಶೀಲತೆ ವೃದ್ಧಿಗೆ ಹಾಗೂ ಮಾನಸಿಕ ಒತ್ತಡ ನಿವಾರಣೆಗೆ ಕ್ರೀಡೆ ಸೇರಿದಂತೆ, ದೈಹಿಕ ಚಟುವಟಿಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ನಮ್ಮ ಮೆದಳು, ದೇಹ ಮತ್ತು ನಾವು ಮಾಡುವ ಕೆಲಸ ಒಂದಕ್ಕೊಂದು ಸಮ್ಮಿಳಿತಗೊಂಡಿರುತ್ತವೆ. ಹಾಗಾಗಿ, ದಿನವೂ ಓಡುವ, ಆಟವಾಡುವ ಹವ್ಯಾಸ ಇರುವವರು ಎರಡು ದಿನ ಓಡದಿದ್ದರೆ, ಆಡದಿದ್ದರೆ ಏನೋ ಕಳೆದುಕೊಂಡ ಭಾವ ಬರಲಿದೆ. ಆದ್ದರಿಂದ ಕ್ರೀಡೆಗಳಲ್ಲಿ ಪಾಲ್ಗೊಳ್ಳಿ ಎಂದರು.
ಇದಕ್ಕೂ ಮುಂಚೆ ನಡೆದ 400 ಮೀಟರ್ ಮತ್ತು ರಿಲೇ ಓಟದಲ್ಲಿ ಪ್ರಥಮ ಸ್ಥಾನ ಪಡೆದ ಇಬ್ಬರು ಕ್ರೀಡಾ ಪಟುಗಳಿಗೆ ಜಿಲ್ಲಾಕಾರಿ ಜಿ.ಎಂ.ಗಂಗಾಧರಸ್ವಾಮಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಲಾ 1 ಸಾವಿರ ರೂ. ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು.
ಮೂರು ದಿನ ನಡೆಯುವ ಕ್ರೀಡಾಕೂಟದಲ್ಲಿ ಜಿಲ್ಲೆಯ 105 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಲಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸ್ವಾಗತಿಸಿದರು. ಎಎಸ್ಪಿ ವಿಜಯಕುಮಾರ್ ಎಂ. ಸಂತೋಷ್ ವಂದಿಸಿದರು. ದೇವರಾಜ ಸಂಗೇನಹಳ್ಳಿ ನಿರೂಪಿಸಿದರು.