ನಾಮದೇವ ಸಿಂಪಿ ಸಮಾಜದ ಶಾಲೆ ನಿರ್ಮಾಣಕ್ಕೆ ಸೈಟ್ ಭರವಸೆ : ದಿನೇಶ್ ಕೆ.ಶೆಟ್ಟಿ

ನಾಮದೇವ ಸಿಂಪಿ ಸಮಾಜದ ಶಾಲೆ  ನಿರ್ಮಾಣಕ್ಕೆ ಸೈಟ್ ಭರವಸೆ : ದಿನೇಶ್ ಕೆ.ಶೆಟ್ಟಿ

ಶ್ರೀ ಪಾಂಡುರಂಗ ವಿಠ್ಠಲ ರುಕ್ಮಿಣಿ ದಿಂಡಿ ಮಹೋತ್ಸವ

ದಾವಣಗೆರೆ, ನ.27- ನಾಮದೇವ ಸಿಂಪಿ ಸಮಾಜ ಶಾಲೆ ನಿರ್ಮಿಸಲು, ಸಿ.ಎ ಸೈಟಿಗೆ ಅರ್ಜಿ ಸಲ್ಲಿಸಿದರೆ, ಸಚಿವರ ಸಮ್ಮುಖದಲ್ಲಿ ಸೂಕ್ತ ಜಾಗ ಒದಗಿಸಿ ಕೊಡಲಿದ್ದೇವೆ ಎಂದು ದೂಡಾ ಅಧ್ಯಕ್ಷ ದಿನೇಶ್‌ ಕೆ. ಶೆಟ್ಟಿ ಭರವಸೆ ನೀಡಿದರು.

99ನೇ ಶ್ರೀ ಪಾಂಡುರಂಗ ವಿಠ್ಠಲ ರುಕ್ಮಿಣಿ ದಿಂಡಿ ಮಹೋತ್ಸವ ನಿಮಿತ್ತ ನಗರದ ಪಿ.ಬಿ. ರಸ್ತೆಯಲ್ಲಿನ ಆರ್‌.ಹೆಚ್‌. ಛತ್ರದಲ್ಲಿ ಬುಧವಾರ ಆಯೋಜಿಸಿದ್ದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೂಡಾದ ವತಿಯಿಂದ ಹರಿಹರ ಮತ್ತು ದಾವಣಗೆರೆಯಲ್ಲಿ ಒಟ್ಟು 21 ಸಿ.ಎ ಸೈಟಿಗೆ ಈಗಾಗಲೇ ಅರ್ಜಿ ಆಹ್ವಾನಿಸಿದ್ದು, ಸಮಾಜದ ಮುಖಂಡರು ಶಾಲೆೆಗಾಗಿ ಸೂಕ್ತ ಜಾಗ ಗುರುತಿಸಿದರೆ, ಸಚಿವರ ಗಮನಕ್ಕೆ ತರುವ ಜತೆಗೆ ಈ ಸಮಾಜದ ಹಿತ ಕಾಪಾಡಲಿದ್ದೇವೆ ಎಂದರು.

ಯುವಕರು, ಸಿಂಪಿ ಸಮಾಜದ ಸಂಸ್ಕೃತಿಗಳಾದ ಭಜನೆ, ಕೀರ್ತನೆ, ಪ್ರವಚನ ಹಾಗೂ ದೇವರ ನಾಮಸ್ಮರಣೆಯಂತಹ ಪದ್ಧತಿಗಳನ್ನು ಮರೆಯಬಾರದು. ಪಾಲಕರೂ ಈ ಕುರಿತು ಮಕ್ಕಳಿಗೆ ಬೋಧಿಸಬೇಕು ಎಂದು ಸಲಹೆ ನೀಡಿದರು.

ಪ್ರಸಕ್ತ ದಿನಗಳಲ್ಲಿ ಮಕ್ಕಳು ಒತ್ತಡಕ್ಕೆ ತುತ್ತಾಗದೇ ಏಕಾಗ್ರತೆಯ ಓದಿನ ಜತೆಗೆ ಕ್ರೀಡೆ, ಸಾಮಾಜಿಕ ಸೇವೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಭಾಗಿಯಾಗಬೇಕು ಮತ್ತು ತಂದೆ-ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸದಂತೆ ಅವರ ಸೇವೆಯಲ್ಲೇ  ಆಯಸ್ಸು ಹೆಚ್ಚಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಪಾಲಿಕೆ ಮೇಯರ್‌ ಕೆ. ಚಮನ್‌ಸಾಬ್‌ ಮಾತನಾಡಿ, ಸಮಾಜದ ವತಿಯಿಂದ ಶಾಲೆ ನಿರ್ಮಿಸಲು ಜಾಗ ಪಡೆಯಲು, ಸಿಎ ಸೈಟಿಗೆ ಅರ್ಜಿ ಸಲ್ಲಿಸಿದರೆ, ದೂಡಾ ಅಧ್ಯಕ್ಷರು ಕಡಿಮೆ ದರದಲ್ಲಿ ಸೈಟ್‌ ಒದಗಿಸಲಿದ್ದಾರೆ ಎಂದು ತಿಳಿಸಿದರು.

ನಗರ ಪಾಲಿಕೆ ಮಾಜಿ ಮಹಾಪೌರರೂ ಆದ ದೊಡ್ಡಪೇಟೆಯ ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಎಂ.ಎಸ್‌. ವಿಠ್ಠಲ್‌ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ, ಸ್ವತಂತ್ರ ಪೂರ್ವದಿಂದಲೇ ಈ ಸಮಾಜವು ದಿಂಡಿ ಮಹೋತ್ಸವ ಆಚರಿಸುತ್ತಾ ಬಂದಿದ್ದು, ಬರುವ ವರ್ಷದಲ್ಲಿ ಶತಮಾನೋತ್ಸವದೊಂದಿಗೆ ದಿಂಡಿ ಮಹೋತ್ಸವ ಆಚರಿಸುವುದಾಗಿ ತಿಳಿಸಿದರು.

ಈ ವೇಳೆ ಸಮಾಜದ ಗೌರವಾಧ್ಯಕ್ಷ ಜ್ಞಾನದೇವ ಬೊಂಗಾಳೆ, ಪ್ರಧಾನ ಕಾರ್ಯದರ್ಶಿ ಮನೋಹರ ವಿ. ಬೊಂಗಾಳೆ, ಉಪಾಧ್ಯಕ್ಷರಾದ ಮಂಜುನಾಥ್‌ ಮಹೇಂದ್ರಕರ್‌, ಕೆ.ಜಿ. ಯಲ್ಲಪ್ಪ, ಅಶೋಕ್‌ ಮಾಳೋದೆ, ಕೋಶಾಧ್ಯಕ್ಷ ಎ. ಪ್ರಭಾಕರ್‌, ಕಿರಣ್‌ ಕುಮಾರ್‌, ಪುಂಡಲೀಕ ಮತ್ತಿತರರಿದ್ದರು.

error: Content is protected !!