ದಾವಣಗೆರೆ, ನ.26- ಸರ್ಕಾರಿ, ಆದರ್ಶ ವಿದ್ಯಾಲಯ ಹಾಗೂ ಅನುದಾನಿತ ಕಾಲೇಜುಗಳ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಿಇಟಿ, ಜೆಇಇ ಹಾಗೂ ನೀಟ್ ಕೋಚಿಂಗ್ ಕೊಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಆದರೆ, ಈ ವರ್ಷ ಕೇವಲ 25 ಸಾವಿರ ವಿದ್ಯಾರ್ಥಿಗಳಿಗೆ ಮಾತ್ರ ಈ ತರಬೇತಿಯನ್ನು ಸೀಮಿತಗೊಳಿಸಿರುವುದು ವಿದ್ಯಾರ್ಥಿ ವಿರೋಧಿ ನಡೆಯಾಗಿದೆ ಎಂದು ಎಐಡಿಎಸ್ಓ ಆಕ್ಷೇಪಿಸಿದೆ.
ರಾಜ್ಯದಲ್ಲಿ ಸಿಇಟಿ ಬರೆಯುವ ಶೇಕಡ 90 ವಿದ್ಯಾರ್ಥಿಗಳನ್ನು ಉಚಿತ ತರಬೇತಿಯಿಂದ ಹೊರಗಿಟ್ಟು ಕೇವಲ ಶೇ. 10 ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಹೊರಟಿದೆ. ಎಸ್ ಎಸ್ ಎಲ್ ಸಿ ತೇರ್ಗಡೆ ಆಧಾರದ ಮೇಲೆ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಪ್ರವೇಶ ಪಡೆದು, ವಿಜ್ಞಾನ ಅಧ್ಯಯನ ನಡೆಸುತ್ತಿರುವ ಎಲ್ಲ ವಿದ್ಯಾರ್ಥಿಗಳು ಈ ತರಬೇತಿಗೆ ಅರ್ಹರು. ಆದರೆ ಸರ್ಕಾರವು ವಿದ್ಯಾರ್ಥಿಗಳ ನಡುವೆ ಅರ್ಹರು, ಅನರ್ಹರು ಎಂಬ ತಾರತಮ್ಯವನ್ನು ಸೃಷ್ಟಿಸುತ್ತಿದೆ. ಭಾರೀ ಮೊತ್ತ ನೀಡಿ ತರಬೇತಿ ಜವಾಬ್ದಾರಿಯನ್ನು ಖಾಸಗೀ ಸಂಸ್ಥೆಯೊಂದಕ್ಕೆ ನೀಡಿರುವುದು ಕೂಡ ಪ್ರಶ್ನಾರ್ಹ ವಿಷಯವಾಗಿದೆ.
ಸರ್ಕಾರವು ಕೂಡಲೇ ಈ ತಾರತಮ್ಯ ವನ್ನು ಕೈಬಿಡಬೇಕು ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿಜ್ಞಾನ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ತರಬೇತಿಯನ್ನು ನೀಡಬೇಕೆಂದು ಎಐಡಿಎಸ್ಓ ಆಗ್ರಹಿಸುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ಟಿ. ಎಸ್. ಸುಮನ್ ಹೇಳಿಕೆ ನೀಡಿದ್ದಾರೆ.