ದಾವಣಗೆರೆ, ನ. 27-`ನಮ್ಮ ಭವಿಷ್ಯಕ್ಕೆ ನಾವೇ ಶಿಲ್ಪಿಗಳು’ ಎಂಬ ಮಾತಿದೆ. ತನ್ನನ್ನು ತಾನು ಉಳಿಯಿಂದ ಕೆತ್ತಿಕೊಳ್ಳುತ್ತಿರುವ ಶಿಲ್ಪ ಕಲಾಕೃತಿಯನ್ನು ನೋಡಿದ್ದೇವೆ. ಆದರೆ ನಾವು ಶಿಲ್ಪಿಗಳಾಗಲು ನಮ್ಮ ಉಪನ್ಯಾಸಕರೇ ಉಳಿಗಳು ಎಂಬುದನ್ನು ದೃಶ್ಯಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕಲಾಕೃತಿಯೊಂದರ ಮೂಲಕ ಹೇಳಲು ಹೊರಟಿದ್ದಾರೆ.
ಹೌದು, ನಗರದ ದೃಶ್ಯಕಲಾ ಮಹಾವಿದ್ಯಾಲ ಯದ ದೃಶ್ಯ ವಿಶ್ವ ಕಲಾ ಗ್ಯಾಲರಿಯಲ್ಲಿ ಸಮಕಾಲೀನ ಸಮೂಹ ಶಿಲ್ಪಕಲಾ ಪ್ರದರ್ಶನ ಏರ್ಪಡಿಸಲಾಗಿದೆ. ಗ್ಯಾಲರಿ ಮುಂಭಾಗವೇ ಇಂತಹದ್ದೊಂದು ಕಲಾಕೃತಿ ಗಮನ ಸೆಳೆಯು ತ್ತದೆ. ಜೊತೆಗೆ ವಿದ್ಯಾರ್ಥಿಗಳಿಗೆ ಉಪನ್ಯಾಸಕರ ಮೇಲಿನ ಗೌರವವನ್ನೂ ತೋರಿಸಿಕೊಡುತ್ತದೆ.
ಅಂದ ಹಾಗೆ ಒಣ ಹುಲ್ಲಿನಿಂದ ಈ ಆಕೃತಿ ರಚಿಸಲಾಗಿದೆ. ತನ್ನನ್ನು ತಾನು ಕೆತ್ತಿಕೊಳ್ಳುವ ಆಕೃತಿ. ಆದರೆ ಅಲ್ಲಿದ್ದ ಉಳಿಗಳು ಮಾತ್ರ ಉಪನ್ಯಾಸಕರ ರೂಪದಲ್ಲಿವೆ.
ಇನ್ನು ಒಳ ಪ್ರವೇಶಿಸುತ್ತಲೇ ವಿವಿಧ ಬಗೆಯ 30ಕ್ಕೂ ಹೆಚ್ಚು ಕಲಾಕೃತಿಗಳು ಗಮನ ಸೆಳೆಯುತ್ತವೆ. ಮನುಷ್ಯನಿಗೆ ಆಸ್ತಿ, ಐಶ್ವರ್ಯ, ಅಧಿಕಾರ ಬಂದರೆ ರೆಕ್ಕೆ ಬಿಚ್ಚಿದ ಹಕ್ಕಿಯಂತೆ ಹಾರಾಡದೆ, ಅವನ ಪಾದಗಳು ನೆಲದಲ್ಲಿಯೇ ಇರಲಿ ಎಂದು ಹೇಳುವ ಆಕೃತಿಯೊಂದಿದೆ. ಹುಲ್ಲು, ನಾರು, ಪೇಪರ್ ಬಳಸಿ ಈ ಕಲಾಕೃತಿ ರಚಿಸಲಾಗಿದೆ. ಅಂದ ಹಾಗೆ ಈ ಕಲಾಕೃತಿ ನೋಡುತ್ತಿದ್ದ ದಾವಿವಿ ಕುಲಪತಿ ಪ್ರೊ.ಕುಂಬಾರ ಅವರು ನಗೆ ಚಟಾಕಿ ಹಾರಿಸಿದ್ದು ಹೀಗೆ `ಈಗ ಯಾರು ಹಾರೋಕೆ ಬಿಡ್ತಾರೆ ಬಿಡ್ರಿ.. ನಾಲ್ಕು ಜನ ಕಾಲಿಡಿದು ಎಳೆಯಲು ಕಾಯ್ತಿರ್ತಾರೆ’
`ಭವಿಷ್ಯದ ಪ್ರಕೃತಿ’ ಶೀರ್ಷಿಕೆಯಡಿ ಮಿಕ್ಸ್ ಮೀಡಿಯಾ ಮಾಧ್ಯಮದಲ್ಲಿ ಪುಸ್ತಕ ಓದುತ್ತಿರುವ ಯುವತಿಯ ಕಲಾಕೃತಿಯನ್ನು ಪೇಪರ್ ಬಳಸಿ ಅಕ್ಷತಾ ವೆಂಕಟೇಶ್ ರಚಿಸಿದ್ದಾರೆ. `ಗೆಲುವಿಗಾಗಿ ಕಿತ್ತಾಟ’ ಎಂಬ ಕಲಾಕೃತಿಯನ್ನು ನವೀನ್ ಕುಮಾರ್ ರಚಿಸಿದ್ದಾರೆ. ಸಂದೀಪ್ ಮಾಳಿಯ `ಜನರ ಇಂದಿನ ಪರಿಸ್ಥಿತಿ’ ಕಲಾಕೃತಿ ಉತ್ತಮ ಅಭ್ಯಾಸಗಳ ಬದಲು ದುಶ್ಚಟಗಳಿಗೆ ಬಲಿಯಾಗುತ್ತಿರುವ ಜನರ ಸ್ಥಿತಿ ವಿವರಿಸುತ್ತದೆ.
ಶಿಲ್ಪಕಲಾವಿದನಿಗೆ ಸಾಂಸ್ಕೃತಿಕ ಕಲೆಗಳು, ಯಕ್ಷಗಾನ, ತಬಲಾ, ಹಾರ್ಮೋನಿಯಂ ಮೊದಲಾದ ಕಲೆಗಳ ಪರಿಚಯವೂ ಇದ್ದರೆ ಚೆನ್ನ ಎಂಬುದನ್ನು ಪ್ರಥಮ ವರ್ಷದ ವಿದ್ಯಾರ್ಥಿ ಪುನಿತ್ ಎಂ. ತಾನು ರಚಿಸಿದ ಕಲಾಕೃತಿ ಮೂಲಕ ಹೇಳಿದ್ದಾನೆ.
ತ್ಯಾಜ್ಯವಸ್ತುಗಳನ್ನು ಬಳಸಿಕೊಂಡು ಥರ್ಮಾಕೋಲ್, ಎಂ ಸ್ಯಾಂಡ್ ಬಳಸಿ ಮಾಡಿರುವ ಈ ಕಲಾಕೃತಿ ಗಮನ ಸೆಳೆಯುತ್ತದೆ.
ವಿನೋದ್ ಆರ್. `ತಂದೆ ತಾಯಿಗಳ ಕನಸು’ ಕಲಾಕೃತಿ ಸೇರಿದಂತೆ ಬದುಕು, ಬವಣೆ, ವಿಡಂಬನೆ, ಪರಿಸರ ಕಾಳಜಿ ತಿಳಿಸುವ ಹಲವಾರು ಕಲಾಕೃತಿಗಳು ಮನಸ್ಸಿಗೆ ಮುದ ನೀಡುತ್ತವೆ. ಕೌತುಕ ಹೆಚ್ಚಿಸುತ್ತವೆ. ಚಿಂತನೆಗೆ ಹಚ್ಚುತ್ತವೆ. ನ.27ರಿಂದ ಡಿ.6ರವೆಗೆ ಪ್ರದರ್ಶನ ಇರಲಿದೆ.