ದಾವಣಗೆರೆ, ನ. 24- ನಾಮದೇವ ಸಿಂಪಿ ಸಮಾಜದಿಂದ ನಾಳೆ ದಿನಾಂಕ 25 ರಿಂದ 27ರವರೆಗೆ 99ನೇ ಶ್ರೀ ಪಾಂಡುರಂಗ ವಿಠ್ಠಲ ರುಕ್ಮಿಣಿ ದಿಂಡಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ನಾಮದೇವಿ ಸಿಂಪಿ ಸಮಾಜ ದೈವ ಮಂಡಳಿಯ ಅಧ್ಯಕ್ಷ ವಿಠ್ಠಲ್ ಎಂ.ಎಸ್. ಹೇಳಿದ್ದಾರೆ.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ದಿನಾಂಕ 25ರ ಸೋಮವಾರ ದೊಡ್ಡಪೇಟೆ ಶ್ರೀ ನಾಮದೇವ ಭಜನಾ ಮಂದಿರದಲ್ಲಿ ಬೆಳಿಗ್ಗೆ 5 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.
ಸಂಜೆ 5 ರಿಂದ 6ರವರೆಗೆ ಹಾಗೂ ಸಂಜೆ 8 ರಿಂದ 10ವರೆಗೆ ಸನ್ಮಾನ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ನಡೆಯಲಿವೆ. ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹಾಗೂ ಬಿಜೆಪಿ ಕೈಗಾರಿಕಾ ಪ್ರಕೋಷ್ಟದ ರಾಜ್ಯ ಸಂಚಾಲಕ ಕೆ.ಬಿ. ಕೊಟ್ರೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕನ್ನಡ ಉಪನ್ಯಾಸಕ ಬಸವರಾಜ ಹನುಮಲಿ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ.
ದಿನಾಂಕ 26ರ ಮಂಗಳವಾರ ಬೆಳಿಗ್ಗೆ ಧಾರ್ಮಿಕ ಕಾರ್ಯಕ್ರಮಗಳು, ಸಂಜೆ 4.30ಕ್ಕೆ ಶ್ರೀ ವಿಠ್ಠಲ ರುಖುಮಾಯಿ ಉತ್ಸವ, ಮೂರ್ತಿ ಮೆರವಣಿಗೆ, ನಂತರ ಕುಂಭೋತ್ಸವ, ಕೀರ್ತನೆ, ಭಜನೆ ಕಾರ್ಯಕ್ರಮಗಳು ನಡೆಯಲಿವೆ.
ದಿನಾಂಕ 27ರಂದು ಪಿ.ಬಿ. ರಸ್ತೆಯಲ್ಲಿರುವ ಧರ್ಮಪ್ರವರ್ತ ರಾಜನಹಳ್ಳಿ ಹನುಮಂತಪ್ಪ ಧರ್ಮಶಾಲೆಯಲ್ಲಿ ಬೆಳಿಗ್ಗೆ 9 ರಿಂದ ರಂಗೋಲಿ ಕಾರ್ಯಕ್ರಮ, ಸಾಂಸ್ಕೃತಿಕ ಹಾಗೂ ವೇಷ
ಭೂಷಣ ಸ್ಪರ್ಧೆ, ಭಕ್ತಿಗೀತೆ ಸ್ಪರ್ಧೆ, ನೃತ್ಯ ಕಾರ್ಯಕ್ರಮಗಳು ನಡೆಯಲಿವೆ. 12.30ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ದೂಡ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಶ್ರೀ ನಾಮದೇವ ಭಜನಾ ಮಂಡಳಿ, ಸಂತ ಸಕ್ಕೂಬಾಯಿ ಮಹಿಳಾ ಮಂಡಳಿ, ಶ್ರೀ ನಾಮದೇವ ತರುಣ ಮಂಡಳಿ, ಶ್ರೀ ನಾಮದೇವ ಭಜನಾ ಮಂದಿರ ನಿರ್ವಹಣಾ ಸಮಿತಿ ಹಾಗೂ ಶ್ರೀ ವಿಠ್ಠಲ ರುಕ್ಮಿಣಿ ಸಮುದಾಯ ಭವನ ನೂತನ ಕಟ್ಟಡ ನಿರ್ಮಾಣ ಸಮಿತಿ ಸಹಯೋಗದಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಾಮದೇವ ಸಿಂಪಿ ಸಮಾಜ ದೈವ ಮಂಡಳಿಯ ಗೌರವಾಧ್ಯಕ್ಷ ಜ್ಞಾನದೇವ ಬೊಂಗಾಳೆ, ಪ್ರಧಾನ ಕಾರ್ಯದರ್ಶಿ ಮನೋಹರ ವಿ.ಬೊಂಗಾಳೆ, ಉಪಾಧ್ಯಕ್ಷ ಅಶೋಕ ಮಾಳೋದೆ, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಕಂಚಿಕೆರೆ ಉಪಸ್ಥಿತರಿದ್ದರು.