ಆದರ್ಶ ವಿದ್ಯಾಲಯ ಶಾಲೆಗೆ ಭೇಟಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಟಿ. ರಾಘವೇಂದ್ರ
ಹರಪನಹಳ್ಳಿ, ನ. 24- ಸತತ ಅಭ್ಯಾಸ, ಪುನರಾವರ್ತನೆ ಮಾಡುವುದರಿಂದ ವಾರ್ಷಿಕ ಪರೀಕ್ಷೆಯನ್ನು ಬರೆಯಲು ಆತ್ಮಸ್ಥೈರ್ಯ ಬರುತ್ತದೆ ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕ ಟಿ. ರಾಘವೇಂದ್ರ ಹೇಳಿದರು.
ತಾಲ್ಲೂಕಿನ ಅನಂತನಹಳ್ಳಿ ಸಮೀಪದ ಸರ್ಕಾರಿ ಆದರ್ಶ ವಿದ್ಯಾಲಯಕ್ಕೆ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡುತ್ತಿದ್ದರು.
ಎಸ್ಸೆಸ್ಸೆಲ್ಸಿ ನಂತರ ಯಾವ ಯಾವ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಸ್ಪಷ್ಟ ನಿರ್ಧಾರವನ್ನು ಮಾಡಬೇಕು. ಈ ಹಂತದಿಂದಲೇ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಅಧ್ಯಯನ ಮಾಡಿದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಬಹುದು. ಪರೀಕ್ಷಾ ಸಮಯದಲ್ಲಿ ವಿಚಲಿತರಾಗದೆ ಅನ್ಯ ಆಕರ್ಷಣೆಗಳಿಗೆ ಒಳಗಾಗದೆ ಅಭ್ಯಾಸ ಮಾಡುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಮಕ್ಕಳು ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು.
ಮುಖ್ಯ ಶಿಕ್ಷಕ ಹೆಚ್.ಕೆ. ಚಂದ್ರಪ್ಪ ಮಾತನಾಡಿ, ಪರೀಕ್ಷೆ ಭಯ ಬಿಟ್ಟು ಬಿಡಿ, ಹಬ್ಬದಂತೆ ಸಂಭ್ರಮಿಸಿ.ಭಯಪಟ್ಟರೆ ಓದಿರುವುದು ಮರೆತು ಹೋಗುತ್ತದೆ. ಗೊಂದಲ ಇದ್ದರೆ ಶಿಕ್ಷಕರನ್ನು ಸಂಪರ್ಕಿಸಿ.
ಪರೀಕ್ಷೆ ಎಂಬುದು ಯುದ್ದವಲ್ಲ. ಅದೊಂದು ಹಬ್ಬದಂತೆ ಸಂಭ್ರಮಿಸಬೇಕು. ಓದಿದ್ದನ್ನು ಮಲಗುವ ಮುನ್ನ ಮತ್ತೊಮ್ಮೆ ನೆನಪು ಮಾಡಿಕೊಳ್ಳಬೇಕು ಎಂದರು.
ಎಸ್ಡಿಎಂಸಿ ಅಧ್ಯಕ್ಷ ಸಿದ್ದನಗೌಡ, ಉಪಾಧ್ಯಕ್ಷ ಶಾರದಮ್ಮ, ಸದಸ್ಯರಾದ ಶೀಲಾ ನಾಯಕ್, ಬಸವನಗೌಡ, ನೇತ್ರಾವತಿ, ಕವಿತಾ, ರಾಧಾ, ಸನಾವುಲ್ಲಾ, ಗೋಣಪ್ಪ, ಎಸ್.ಎಂ. ಪುಷ್ಪ, ಕಿರಣ್, ಮೋಹನ್ ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕ, ಸಿಬ್ಬಂದಿಯವರು ಸೇರಿದಂತೆ ಇತರರು ಇದ್ದರು.