ಹೊನ್ನಾಳಿ, ನ.22- ತಾಲ್ಲೂಕಿನಲ್ಲಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ‘ಕ್ವಿಜ್ಲಿ ಆಪ್’ ತಂತ್ರಜ್ಞಾನ ಬಳಸುವ ಮೂಲಕ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ಶುಕ್ರವಾರ ಎಚ್. ಕಡದಕಟ್ಟೆ ಸಮೀಪದ ಸಾಯಿ ಗುರುಕುಲ ವಸತಿ ಶಾಲೆಯಲ್ಲಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ಆಪ್ ಚನ್ನಗಿರಿ ತಾಲ್ಲೂಕುಗಳ ಶಾಲೆಗಳಲ್ಲಿ ಅಳವಡಿಸಿದ್ದು ಅಲ್ಲಿನ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿರುವ ಹಿನ್ನೆಲೆಯಲ್ಲಿ ಹೊನ್ನಾಳಿ-ನ್ಯಾಮತಿ ತಾಲ್ಲೂಕುಗಳಲ್ಲಿ ಕೂಡ ಕ್ವಿಜ್ಲಿ ಆಪ್ ತಂತ್ರಜ್ಞಾನ ಅಳವಡಿಸಲು ನಿರ್ಧರಿಸಿದ್ದು, ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಇದನ್ನು ಅಳವಡಿಸಲು ತೀರ್ಮಾನಿಸಲಾಗಿದೆ ಎಂದರು.
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಈ ಬಾರಿ ಹೊನ್ನಾಳಿ ಕ್ಷೇತ್ರವು ದಾವಣಗೆರೆ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಬರುವಂತೆ ಪ್ರಯತ್ನಿಸಲಾಗುವುದು. ಆಪ್ ಬಳಕೆಯ ಸಾಧಕ – ಬಾಧಕಗಳನ್ನು ಗಮನಿಸಿ 8 ಮತ್ತು 9 ನೇ ತರಗತಿಗೆ ವಿಸ್ತರಿಸಲು ಚಿಂತನೆ ನಡೆಸಲಾಗುವುದೆಂದರು.