ಕದ್ದರೆ ಸಕ್ಕರೆ ಅಚ್ಚು, ಹಿಡಿದು ತಂದು ಚಚ್ಚು?!!..

ಕದ್ದರೆ ಸಕ್ಕರೆ ಅಚ್ಚು, ಹಿಡಿದು ತಂದು ಚಚ್ಚು?!!..

ಗೌರಿ ಆರತಿಯ ಹಾಡುಗಳು ಹಾಗೂ ಸಕ್ಕರೆ ಅಚ್ಚು ತಿನ್ನುವ ಮಕ್ಕಳ ಬಗ್ಗೆ ಹೇಳಿದ್ದೆ. ಈಗ ಸಕ್ಕರೆ ಅಚ್ಚುಗಳನ್ನು ಕದಿಯುತ್ತಿದ್ದವರ ಬಗ್ಗೆ ಹೇಳುವೆ, ಹಾಗಂತ ಇವರು ಕಳ್ಳರಲ್ಲ, ಇವರು ಸಹಾ ಸಕ್ಕರೆ ಅಚ್ಚು ಗಳನ್ನು ಇಷ್ಟಪಡುವವರು ಅಷ್ಟೇ.

ಶೀಗೆ ಹುಣ್ಣಿಮೆ ಹಾಗೂ ಕಾರ್ತಿಕ ಹುಣ್ಣಿಮೆ ಈ ಎರಡು ದಿನಗಳಲ್ಲಿ ಮಾತ್ರ ಗೌರಿ ಆರತಿಗೆ ಸಕ್ಕರೆ ಅಚ್ಚು ತೆಗೆದುಕೊಂಡು ಹೋಗುವುದು. ತವರು ಮನೆಗೆ ಬಂದ ಗೌರಿ ಶಿವನೊಡನೆ ವಾಪಸ್ ಕೈಲಾಸಕ್ಕೆ ಹೊರಟಾಗ ಅವಳಿಗೆ ಉಡಿತುಂಬಿ ಆರತಿ ಮಾಡಲು ಸಕ್ಕರೆ ಅಚ್ಚುಗಳನ್ನು ಒಯ್ಯುವುದು ಪದ್ಧತಿ. ಅದರಲ್ಲೂ ಚೌಕಿಪೇಟೆಯ ಶ್ರೀ ಬಕ್ಕೇಶ್ವರ ದೇವಸ್ಥಾನದಲ್ಲಿ ಈ ಎರಡು ಹುಣ್ಣಿಮೆಗಳಂದು ಕೂರಿಸಿ ಅಲಂಕರಿಸಿರುವ ಶಿವ ಪಾರ್ವತಿ ವಿಗ್ರಹಗಳಂತೂ ತುಂಬಾ ಮನಮೋಹಕ.

ಕಿನ್ನಾಳ ಕಲೆಯ ಶೈಲಿಯಲ್ಲಿ ಮರದಲ್ಲಿ ಮಾಡಿದ ಆಳೆತ್ತರದ ಈ ಗೊಂಬೆಗಳ ವಿಶೇಷವೆಂದರೆ ನಂದಿಯ ಮೇಲೆ ಶಿವ ಕುಳಿತುಕೊಂಡು ತನ್ನ ಮುಂಭಾಗದಲ್ಲಿ ಪಾರ್ವತಿಯನ್ನು ಕೂರಿಸಿಕೊಂಡಿರುತ್ತಾನೆ.
ನೀಲ ವರ್ಣದ ಶಿವನ ಮುಂದೆ ಬಿಳಿವರ್ಣದ ಗೌರಿ ಮುದ್ದಾಗಿ ಕಾಣುತ್ತಿರುತ್ತಾಳೆ. ಈ ಗೌರಿಗೆ ಉಡಿ ತುಂಬಲು ಹಳೆ ಊರಿನ ಎಲ್ಲಾ ಪ್ರದೇಶಗಳಿಂದ ಸಕ್ಕರೆ ಅಚ್ಚುಗಳ ಸಹಿತ
ಆರತಿ ತರುವ ಹೆಣ್ಣುಮಕ್ಕಳು  ಈಗ ಐದಾರು ದಶಕಗಳ ಹಿಂದೆ ದೇವಸ್ಥಾನದ ಬಳಿ ಬರುವವರೆಗೂ ಸಂತೋಷ ಸಡಗರದಿಂದ ಹಾಡು ಹೇಳುತ್ತಾ ಬಂದರೆ ದೇವಸ್ಥಾನದ ಬಳಿ ಬರುವಾಗ ಆತಂಕಕ್ಕೆ ಒಳಗಾಗುತ್ತಿದ್ದರು!.
ಕಾರಣ ಆರತಿ ತಟ್ಟೆಗಳಲ್ಲಿ ಜೋಡಿಸಿ ತಂದ ಸಕ್ಕರೆ ಅಚ್ಚುಗಳನ್ನು ಅಪಹರಿಸುವ ಹುಡುಗರುಗಳು ಅಲ್ಲಿರುತ್ತಿದ್ದರು.
ಆಗೆಲ್ಲ ಈಗಿನಂತೆ ರಸ್ತೆಯಲ್ಲಿ ಅಷ್ಟಾಗಿ ಜನ ಸಂಚಾರ ಇರುತ್ತಿರಲಿಲ್ಲ. ಬೀದಿ ದೀಪಗಳು ಈಗಿನಷ್ಟು ಪ್ರಖರವಾಗಿ ಇರುತ್ತಿರಲಿಲ್ಲ. ದೇವಸ್ಥಾನದ ಎದುರು ರಸ್ತೆಯಲ್ಲಿ ಮಂದ ಬೆಳಕಿನ ಒಂದು ಮರ್ಕ್ಯೂರಿ ಲೈಟ್ ನೇತಾಡುತ್ತಿತ್ತು ಅಷ್ಟೇ.      

ಸಕ್ಕರೆ ಅಚ್ಚುಗಳನ್ನು ಹಾರುಬಡಿದ ಅಂದರೆ ಅಪಹರಿಸಿದ ಹುಡುಗರು ದೇವಸ್ಥಾನದ ಕಣದ ಬಲಪಕ್ಕದ ಕಟ್ಟೆ ಹತ್ತಿ, ಬಯಲು ದಾಟಿ, ಅಲ್ಲಿದ್ದ ಚಿಕ್ಕ ಚಿಕ್ಕ ಮನೆಗಳ ಸಂದಿನಿಂದ ಓಡಿ, ಕಮ್ಮಾರಿಕೆ ಮಾಡುವ ಕುಲುಮೆಯ ಕಡೆ ಹೋಗಿ, ಅದರಿಂದ ಆಚೆ ಐನಳ್ಳಿಯವರ ಬೆಂಕಿ ಪೊಟ್ಟಣದ ವ್ಯಾನ್ ನಿಲ್ಲುವ ಎದುರುಗಡೆಯ ಸುಣ್ಣದ ಗಾರೆ ಅರೆಯುತ್ತಿದ್ದುದರ ಅವಶೇಷಗಳ  ಬಳಿ  ಕುಳಿತು ಸಕ್ಕರೆ ಅಚ್ಚು ತಿಂದು ಮತ್ತೆ ದೇವಸ್ಥಾನದ ಬಳಿ ಬಂದು ಸಂಭಾವಿತರಂತೆ ಅಲ್ಲೇ ತಿರುಗಾಡುತ್ತಿರುತ್ತಿದ್ದರು.

 

ಅಂತವರು ಯಾರೆಂದು ದೇವಸ್ಥಾನದವರಿಗೂ ಗೊತ್ತಿತ್ತು.  ಇವರ ಉಪಟಳ ಜಾಸ್ತಿಯಾದಂತೆ ಒಮ್ಮೆ ದೇವಸ್ಥಾನದ ಹಿರಿ ತಲೆಗಳು ಆಲೋಚನೆ ಮಾಡಿದರು. ದಾವಳಗಿ ಕೊಟ್ರಪ್ಪ ಇವರು ಆಗ ಜನಪ್ರಿಯವಾಗಿದ್ದ ಫ್ಯಾನ್ಸಿ ಅಂಗಡಿ ಅಲಂಕಾರ ಸ್ಟೋರ್ ಷಣ್ಮುಖಪ್ಪನವರ ಮಾವ ಇರಬೇಕು, ಈ ದಾವಳಗಿ  ಕೊಟ್ರಪ್ಪ ಅಮಾವಾಸ್ಯೆ ರಾತ್ರಿ ಭಜನೆ ಪ್ರಸಾದವಾಗಿ ಮಂಡಕ್ಕಿ ಉಸುಳಿಯನ್ನು ತುಂಬಾ ಸೊಗಸಾಗಿ ಮಾಡುತ್ತಿದ್ದರು. ಆದರೆ ಕೊಡುವಾಗ ಮಾತ್ರ ಅವರದೇ ವಿಧಾನ ಅನುಸರಿಸುತ್ತಿದ್ದರು. ಆ ಸ್ವಾರಸ್ಯವನ್ನು ಮುಂದೊಮ್ಮೆ ಬರೆಯುವೆ)

ಸಕ್ಕರೆ ಅಚ್ಚು ಹಾರು ಬಡಿಯುವ ಹುಡುಗರನ್ನು ಹಿಡಿದು ತಂದು ಚಚ್ಚಬೇಕು ಎಂದು ದಾವಳಗಿ ಕೊಟ್ರಪ್ಪ ಹೇಳಿದರು. ಆದರೆ ಮತ್ತೋರ್ವ ಹಿರಿಯರಾದ ಬಹುಷಃ ಮಾಗಾನಹಳ್ಳಿ ಗುರುಪಾದಪ್ಪ ಇರಬೇಕು ಅವರು “ಕೊಟ್ರಪ್ಪಾ.. ಆ ಹುಡ್ರು ನಮಗೆ ಬೇಕಾಗ್ತಾರೆ, ಹಂಗೆಲ್ಲಾ ಹೊಡೆಯೋದು ಬ್ಯಾಡ, ನಾನು ಬೇರೆ ಐಡಿಯಾ ಮಾಡ್ತೀನ್ ತಡೀ” ಅಂದರು.

ರಥೋತ್ಸವದ ಸಮಯದಲ್ಲಿ ತೇರು ಕಟ್ಟುವಾಗ ಸಹಾಯ ಮಾಡಲು, ತೇರಿನ ಹಿತ್ತಾಳೆ ತಗಡುಗಳನ್ನು ತಿಕ್ಕಿ ತೊಳೆದು ಜೋಡಿಸಿಡಲು, ತೇರಿನ ಹಿಂದಿನ ರಾತ್ರಿ ಸೊಪ್ಪು ಸದೆಗಳನ್ನು ತಂದು ಬೀದಿಯುದ್ದಕ್ಕೂ ಕಂಬಕ್ಕೆ ಕಟ್ಟಿ ಅಲಂಕಾರ ಮಾಡಲು, ತೇರಿನ ದಿನ ಮಾರ್ಗದುದ್ದಕ್ಕೂ ತೆಂಗಿನಕಾಯಿ ಒಡೆದುಕೊಡಲು ಮುಂತಾಗಿ ಅನೇಕ ಕಾರ್ಯಗಳಿಗೆ ಈ ಪೈಕಿ ಕೆಲವು ಹುಡುಗರುಗಳ ಅಗತ್ಯವಿತ್ತು.

ಸಕ್ಕರೆ ಅಚ್ಚು ಅಪಹರಿಸುವ ಆ ಹುಡುಗರನ್ನು ಹುಣ್ಣಿಮೆಯ  ದಿನ ಬೆಳಿಗ್ಗೆ ಗುರುಪಾದಪ್ಪ  ಕರೆಸಿ “ಲೇ  ಹುಡ್ರಾ, ಸಂಜಿ ಆರ್ತಿ ತರೋರ ಸಕ್ರಿ ಅಚ್ಚು ಯಾರೋ ಕೆಟ್ಟ ಹುಡ್ರು ಹಾರ್ ಬಡೀತಾರಂತೆ, ನೀವು ಕಾದಿದ್ದು ಅಂತಾ ಹುಡ್ರು ಹತ್ರಾ ಬರದಂಗೆ ನೋಡ್ಕಾಬೇಕ್ರಲೇ” ಎಂದರು.

ಹುಡುಗರು “ಆಗಲಣ್ಣ, ಆಗ್ಲಣ್ಣ” ಎಂದರು. ಸಕ್ಕರೆ ಅಚ್ಚಿನ ಹಾರು ಬಡಿಯುವಿಕೆ ನಿಂತೇ ಹೋಯಿತು!!. ಗುರುಪಾದಪ್ಪನವರ ಐಡಿಯಾ ಯಶಸ್ವಿಯಾಯಿತು.

ಗೌರಿ ಆರತಿಯ ಸ್ವಾರಸ್ಯಗಳು ಇನ್ನೂ ಹೇಳಿದಷ್ಟೂ ಇವೆ. ಆದರೆ ಇಲ್ಲಿಗೆ ಮುಗಿಸುವೆ. ಬೇರೆ ಸ್ವಾರಸ್ಯಕರ ವಿಚಾರಗಳನ್ನು ಮುಂದೆ ಬರೆಯುವೆ.

  ಹೆಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತ

error: Content is protected !!