ಹಾವೇರಿ, ನ.22- ಇದೇ ದಿನಾಂಕ 13 ರಂದು ನಡೆದ ಶಿಗ್ಗಾಂವಿ- ಸವಣೂರು ವಿಧಾನಸಭಾ ಉಪಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಬೆಳಿಗ್ಗೆ 8 ಗಂಟೆಯಿಂದ ಹಾವೇರಿ ಹತ್ತಿರದ ದೇವಗಿರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ.
ಕಾಲೇಜಿನ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಮತ ಎಣಿಕೆ ಕಾರ್ಯ ಸುಗಮವಾಗಿ ನಡೆಯಲು ಓರ್ವ ಎಸ್ಪಿ, ಓರ್ವ ಹೆಚ್ಚುವರಿ ಎಸ್ಪಿ, ನಾಲ್ವರು ಡಿವೈಎಸ್ಪಿ, 9 ಜನ ಸರ್ಕಲ್ ಇನ್ಸ್ ಪೆಕ್ಟರ್, 25 ಸಬ್ ಇನ್ಸ್ ಪೆಕ್ಟರ್ , 29 ಎಎಸ್ ಐ, 250 ಹೆಡ್ ಕಾನ್ ಸ್ಟೇಬಲ್, ಎರಡು ತುಕಡಿ ಕೆಎಸ್ ಆರ್ ಪಿ ಜೊತೆಗೆ 4 ಡಿಎಆರ್ ಒಳಗೊಂಡ ಪೊಲೀಸ್ ಭದ್ರತೆ ಇರಿಸಲಾಗಿದೆ. ಮತ ಎಣಿಕೆ ನಂತರ ಮೆರವಣಿಗೆ ಮುಂತಾದವುಗಳನ್ನು ನಿಷೇಧಿಸಲಾಗಿದೆ.
ಎಣಿಕೆ ಏಜೆಂಟರು ಬರೆದು ಕೊಳ್ಳಲು ಪೆನ್ನು ಹಾಗೂ ಹಾಳೆ ಹೊರತು ಪಡಿಸಿ ಮೊಬೈಲ್, ಅಡಕಿ, ಎಲೆ, ತಂಬಾಕು ಉತ್ಪನ್ನ , ಗುಟಕಾ, ನೀರಿನ ಬಾಟಲ್, ಹರಿತವಾದ ಆಯುಧ, ಬೆಂಕಿ ಪಟ್ಟಣ, ಬೀಡಿ-ಸಿಗರೇಟ್ ಹಾಗೂ ಯಾವುದೇ ತರಹದ ಸ್ಪೋಟಕ ಸಾಮಗ್ರಿಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಅವರಿಗೆ ಉಪಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ. ನಿಯಮ ಉಲ್ಲಂಘಿಸಿದವರ ವಿರುದ್ದ ಕಾನೂನು ಕ್ರಮ ಜರುಗಿಸುವ ಸೂಚನೆ ನೀಡಲಾಗಿದೆ.
ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ನಡೆದಿದ್ದು ಸೋಲು-ಗೆಲುವಿನ ಪರ ಬೆಟ್ಟಿಂಗ್ ನಡೆದ ಬಗ್ಗೆ ತಿಳಿದುಬಂದಿದೆ. ಕ್ಷೇತ್ರದ ಗ್ರಾಮವೊಂದರಲ್ಲಿ ಎತ್ತುಗಳನ್ನು ರಸ್ತೆ ಮಧ್ಯದಲ್ಲಿ ನಿಲ್ಲಿಸಿ `ಇವು ಕಾಂಗ್ರೆಸ್ ಎತ್ತುಗಳು, ಇವು ಬಿಜೆಪಿ ಎತ್ತುಗಳು ಎಂದು ಇಬ್ಬರು ರೈತರು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳೇ ಗೆಲ್ಲುತ್ತಾರೆ ಎಂದು ಬೆಟ್ಟಿಂಗ್ ಕಟ್ಟಿದ್ದಾರೆ’ ಎನ್ನುವ ಸುದ್ದಿ ಕ್ಷೇತ್ರದಾದ್ಯಂತ ಬಸ್ ನಿಲ್ದಾಣ, ರೈಲು ನಿಲ್ದಾಣ, ಅಂಗಡಿ ಮುಂಗಟ್ಟು, ಊರುಗಳಲ್ಲಿನ ಕಟ್ಟೆ, ಹೊಲಗಳಲ್ಲಿ ಹರಿದಾಡುತ್ತಿರುವುದು ಕೇಳಿಬರುತ್ತಿದೆ.