ದಾವಣಗೆರೆ, ನ.22- ನಗರದ ರೇಣುಕ ಮಂದಿರದಲ್ಲಿ ನಾಳೆ ದಿನಾಂಕ 23ರ ಶನಿವಾರ ರಾಜ್ಯಮಟ್ಟದ ಕನ್ನಡ ನುಡಿ-ನಮನ, ಅಖಿಲ ಭಾರತ ವಿಶ್ವಕರ್ಮ ಪರಿಷತ್‌ನ ಸಂಸ್ಥಾಪನಾ ದಿನಾಚರಣೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ `ಪ್ರಶಸ್ತಿ ಪ್ರದಾನ’ ಹಾಗೂ `ಪ್ರತಿಭಾ ಪುರಸ್ಕಾರ’ ಸೇರಿದಂತೆ, ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಪರಿಷತ್‌ನ ರಾಜ್ಯಾಧ್ಯಕ್ಷ ಹೆಚ್.ವಿ. ಸತೀಶ್ ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಿನ ಒಳಿತಿಗಾಗಿ ಅಂದು ಬೆಳಗ್ಗೆ 8ಕ್ಕೆ ಮಹರ್ಷಿ ಆನಂದ ಗುರೂಜಿ ಅವರ ಸಮ್ಮುಖದಲ್ಲಿ ಗಣ ಹೋಮ, ಧನ್ವಂತರಿ ಹೋಮ ಹಾಗೂ ಮಹಾ ಮೃತ್ಯುಂಜಯ ಯಾಗ ನಡೆಯಲಿದೆ ಎಂದರು.
9ಕ್ಕೆ ಗಾಂಧಿ ವೃತ್ತದಿಂದ ರೇಣುಕ ಮಂದಿರದ ವರೆಗೆ ವಿಶ್ವಕರ್ಮ ಮೂರ್ತಿಯ ಗಜ ವಾಹನೋತ್ಸವ ಹಾಗೂ ವಿವಿಧ ಸಾಂಸ್ಕೃತಿಕ ಕಲಾ ಮೇಳಗಳೊಂದಿಗೆ ಮೆರವಣಿಗೆ ಜರುಗಲಿದೆ. ಮಧ್ಯಾಹ್ನ 12.30ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ. ಸೋಮಶೇಖರ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕರಾದ ಕೆ.ಎಸ್.ಬಸವಂತಪ್ಪ, ದೇವೇಂದ್ರಪ್ಪ, ಶಾಂತನಗೌಡ, ಬಿ.ಪಿ.ಹರೀಶ್, ಶಿವಗಂಗಾ ಬಸವರಾಜ್ ಮತ್ತು ಮೇಯರ್ ಚಮನ್ ಸಾಬ್ ಸೇರಿದಂತೆ, ಗಣ್ಯರು ಆಗಮಿಸಲಿದ್ದಾರೆ
ಅಯೋಧ್ಯೆಯ ರಾಮ ಮಂದಿರದ ಶ್ರೀ ರಾಮಲಲ್ಲಾ ವಿಗ್ರಹದ ಶಿಲ್ಪಿ ಅರುಣ್ ಯೋಗಿರಾಜ್ ಹಾಗೂ ಅವರ ಕುಟುಂಬದ ಸದಸ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
ಜಾನಪದ ಗಾಯಕ ಕಡಬಗೆರೆ ಮುನಿರಾಜು ಹಾಗೂ ಚಲನಚಿತ್ರ ನಟಿ ಭವ್ಯ, ರೇಖಾದಾಸ್ ಹಾಗೂ ಖ್ಯಾತ ಹಾಸ್ಯ ಚಿತ್ರನಟ ಸಾಧು ಕೋಕಿಲಾ ಅವರ ಸಹೋದರ ಲಯ ಕೋಕಿಲಾ ಅವರ ಸಹಕಾರದಿಂದ ಮನೋ ರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಈ ವೇಳೆ ಪರಿಷತ್ತಿನ ತಿಪ್ಪೇಸ್ವಾಮಿ, ಕೆ. ಸೋಮಶೇಖರಚಾರ್, ಶಾಮನೂರು ನಾಗರಾಜ್, ಕಾಳಾಚಾರ್ ಇತರರು ಇದ್ದರು.