ಸದ್ವರ್ತನೆಯಿಂದ ಸುಖಮಯ ಜೀವನ

ಸದ್ವರ್ತನೆಯಿಂದ ಸುಖಮಯ ಜೀವನ

ಹರಪನಹಳ್ಳಿ : ಐಕ್ಯತಾ ಸಪ್ತಾಹದಲ್ಲಿ ಹೆಚ್. ಮಲ್ಲಿಕಾರ್ಜುನ್‌

ಹರಪನಹಳ್ಳಿ, ನ. 22- ಸದ್ವರ್ತನೆ ಯಿಂದ ನಡೆದುಕೊಂಡಲ್ಲಿ ಸುಖಮಯ ಜೀವನ ನಮ್ಮದಾಗುತ್ತದೆ. ಕೋಪದಿಂದ ದುರ್ಘಟನೆಗಳು ಸಂಭವಿಸಿ ಬದುಕು ನರಕಮಯವಾಗುತ್ತದೆ ಎಂದು ಉಪನ್ಯಾಸಕ ಹೆಚ್. ಮಲ್ಲಿಕಾರ್ಜುನ  ಹೇಳಿದರು.

ತಾಲ್ಲೂಕಿನ ಕಂಭಟ್ರಹಳ್ಳಿ ಬಳಿ ಇರುವ ಸಬ್ ಜೈಲಿನಲ್ಲಿ ಐಕ್ಯತಾ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಅಪರಾಧಗಳು ಹೆಚ್ಚಾಗಲು ಡಿಜಿಟಲ್ ಮಾಧ್ಯಮಗಳು ಕಾರಣವಾಗಿವೆ. ದುಡುಕಿನ ನಿರ್ಧಾರದಿಂದ ಅಪರಾಧಗಳು ಹೆಚ್ಚಾಗುತ್ತಿವೆ. ಜೀವನ ಅತ್ಯಮೂಲ್ಯ ವಾದುದು. ಆ ಜೀವನವನ್ನು ಸಂಪೂರ್ಣ ಜೀವಿಸಿ ಸಾರ್ಥಕ ಮಾಡಿಕೊಳ್ಳಬೇಕು. ಆಕಸ್ಮಿಕವಾದ ಘಟನೆಗಳಿಂದ ತಪ್ಪುಗಳಾಗಿರಬಹುದು. ಮುಂದೆ ಇಂತಹ ತಪ್ಪುಗಳಾಗ ದಂತೆ ನಡೆದುಕೊಳ್ಳಬೇಕು. ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು. ಕ್ಷಣಿಕ ಸುಖಕ್ಕೆ ಒಳಗಾಗಿ ಬಲಿಯಾಗಬಾರದು. ಯುವಕರು ತಮ್ಮ ಅತ್ಯುತ್ತಮ ಭವಿಷ್ಯವನ್ನು ರೂಪಿಸಿ ಕೊಂಡು ನಿಮ್ಮ ನಡತೆಯನ್ನು ಬದಲಾಯಿಸಿಕೊಂಡು ಉತ್ತಮ ಪ್ರಜೆಗಳಾಗಿ,  ಆತ್ಮವಿಶ್ವಾಸದಿಂದಿದ್ದು ಕುಟುಂಬ ವರ್ಗದವರಿಗೂ ಸಕಾರಾತ್ಮಕವಾದ ಮಾತುಗಳನ್ನಾಡಿ ಆತ್ಮವಿಶ್ವಾಸ ತುಂಬಬೇಕು. ಎಲ್ಲರಿಗೂ ಇನ್ನೂ ಭವಿಷ್ಯವಿದೆ ಎಂಬ ಭರವಸೆಯಿಂದ ಜೀವನ ಸಾಗಿಸಬೇಕು ಎಂದರು.

ಉಪ ಕಾರಾಗೃಹದ ಅಧೀಕ್ಷಕ ಕೆ.ಜಿ. ಭಂಡಾರೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಹಾಯಕ ಜೈಲರ್ ಎಫ್.ಜಿ. ಬಾರಿಕೇರ ಮತ್ತು ಎಸ್. ಆರ್. ನಾವಿ ಹಾಗೂ ಉಪ ಕಾರಾಗೃಹದ ಸಿಬ್ಬಂದಿ ಉಪಸ್ಥಿತರಿದ್ದರು.

error: Content is protected !!