ದಾವಣಗೆರೆ, ನ. 22- ಬಸಾಪುರ ಗ್ರಾಮದಲ್ಲಿ ಪಾಲಿಕೆಯ 15ನೇ ಹಣಕಾಸು ನಿಧಿಯಡಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶಾಮನೂರು ಶಿವಶಂಕರಪ್ಪ ಚಾಲನೆ ನೀಡಿದರು.
ನಂತರ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ಶಾಸಕರು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಹುತೇಕ ಎಲ್ಲಾ ವಾರ್ಡ್ಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ಮುಕ್ತಾಯಗೊಂಡಿದ್ದು, ಇನ್ನು ಕೆಲವು ಕಾಮಗಾರಿಗಳಿವೆ. ಅವುಗಳನ್ನು ಅದಷ್ಟು ಶೀಘ್ರ ಪೂರ್ಣಗೊಳಿಸಲಾಗುವುದು ಎಂದರು.
ಬಸಾಪುರ ಗ್ರಾಮದ ಬಹುತೇಕ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಇದೀಗ ಇನ್ನಷ್ಟು ಅಭಿವೃದ್ಧಿ ಬಗ್ಗೆ ಮನವಿ ಮಾಡಿರುವ ಗ್ರಾಮಸ್ಥರು ಚುನಾವಣೆ ಬಂದ ವೇಳೆ ಜಾತಿ, ಮತ ನೋಡದೇ ಅಭಿವೃದ್ಧಿ ಮಾಡಿರುವವರ ಪರವಾಗಿ ಮತ ಚಲಾಯಿಸಬೇಕೆಂದು ಕರೆ ನೀಡಿದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯ ಬಾ.ಮ.ಬಸವರಾಜಯ್ಯ ಮಾತನಾಡಿ, ಎಸ್ಸೆಸ್ ಶಾಸಕರಾದ ನಂತರ ನಮ್ಮ ಗ್ರಾಮದ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಜೊತೆಗೆ ಗ್ರಾಮಸ್ಥರ ಬೇಡಿಕೆಗೆ ಸದಾ ಸ್ಪಂದಿಸಿದ್ದಾರೆ ಎಂದರು.
ಎಪಿಎಂಸಿ ಮಾಜಿ ನಿರ್ದೇಶಕ ಎಂ.ಎಸ್.ಕೊಟ್ರಯ್ಯ, ಗ್ರಾಮದ ಮುಖಂಡ ಸುರೇಂದ್ರಪ್ಪ ಮಾತನಾಡಿ, ಗ್ರಾಮದ ಸ್ಮಶಾನ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಹಾಪೌರ ಕೆ.ಚಮನ್ ಸಾಬ್, ಸದಸ್ಯರಾದ ಶ್ರೀಮತಿ ಶೀವಲೀಲಾ, ಆಯುಕ್ತರಾದ ಶ್ರೀಮತಿ ರೇಣುಕಾ, ಮಹೇಶ್ವರಪ್ಪ, ನಾಗೇಂದ್ರಚಾರ್, ಚೌಡಪ್ಪ, ಲಿಂಗರಾಜ್, ಬಿ.ಟಿ. ಮರಳಸಿದ್ದಪ್ಪ, ಕೆ.ಎಂ.ಕೊಟ್ರಯ್ಯ, ರೇವಣಸಿದ್ದಪ್ಪ, ರವೀಂದ್ರ, ತಿಪ್ಪೇಶ್, ಶಿವಪ್ಳರ ಉಮೇಶ್, ಅರುಣ ಕುಮಾರ್, ಎ.ಕೆ.ರಾಮಪ್ಪ ಮತ್ತಿತರರಿದ್ದರು.