ದಾವಣಗೆರೆ, ನ.21- ರಾಷ್ಟ್ರೀಯ ಶ್ವಾಸಕೋಶ ಅಧ್ಯಾಯ ಜಿಲ್ಲಾ ಹಾಗೂ ನಗರ ಶಾಖೆ ವತಿಯಿಂದ ನಗರದ ಎಸ್.ಎಸ್. ಕನ್ವೆನ್ಷನ್ ಹಾಲ್ನಲ್ಲಿ ನಾಳೆ ದಿನಾಂಕ 22ರಿಂದ 24ರ ವರೆಗೆ `ಮಕ್ಕಳ ಶ್ವಾಸಕೋಶ ತಜ್ಞರ ಜಾಗತಿಕ ಸಮ್ಮೇಳನ’ ನಡೆಯಲಿದೆ ಎಂದು ಸಂಘಟನಾ ಅಧ್ಯಕ್ಷ ಡಾ.ಎನ್.ಕೆ. ಕಾಳಪ್ಪನವರ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್.ಎಸ್. ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ, ಜೆಜೆಎಂ ವೈದ್ಯಕೀಯ ಕಾಲೇಜು, ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಸಮ್ಮೇಳನ ನಡೆಯುತ್ತಿದ್ದು, ದಾವಣಗೆರೆಯಲ್ಲಿ ಇದು 3ನೇ ಬಾರಿಗೆ ನಡೆಯುತ್ತಿರುವ ಕಾರ್ಯಕ್ರಮವಾಗಿದೆ ಎಂದರು.
ರೆಸ್ಪಿಕಾನ್-2024 ರಾಷ್ಟ್ರೀಯ-ಶ್ವಾಸಕೋಶದ ಅಧ್ಯಾಯ 36ನೇ ವಾರ್ಷಿಕ ಸಮ್ಮೇಳನದಲ್ಲಿ, ಮಕ್ಕಳ ಶ್ವಾಸಕೋಶ ಆರೈಕೆಯಲ್ಲಿ ಇತ್ತೀಚಿನ ಪ್ರಗತಿ ಮತ್ತು ಸಾಧನೆಗಳನ್ನು ಚರ್ಚಿಸುವ ನಿಟ್ಟಿನಲ್ಲಿ ಜಾಗತಿಕ ತಜ್ಞರ ಸಮ್ಮೇಳನ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಮ್ಮೇಳನದಲ್ಲಿ ಮುಖ್ಯವಾಗಿ ಮಕ್ಕಳ ಶ್ವಾಸಕೋಶ ಆರೋಗ್ಯದ ಪ್ರಗತಿಗೆ ಹೆಚ್ಚಿನ ರೀತಿಯಲ್ಲಿ ಒತ್ತುಕೊಡಲಾಗಿದ್ದು, ಪ್ರಮುಖ ವಾಗಿ ಕಾರ್ಯಾಗಾರಗಳು, ಪ್ಯಾನಲ್ ಚರ್ಚೆಗಳ ಸರಣಿ, ಸಂಶೋಧಕರಿಗೆ ತಮ್ಮ ನವೀನತೆಯ ಆವಿಷ್ಕಾರಗಳನ್ನು ಪ್ರಸ್ತುತ ಪಡಿಸಲು ವೇದಿಕೆ ಒದಗಿಸಲಾಗಿದೆ ಎಂದು ತಿಳಿಸಿದರು.
22ರ ಬೆಳಗ್ಗೆ 8 ರಿಂದ 4.30ರ ವರೆಗೆ ಜೆಜೆಎಂ ವೈದ್ಯಕೀಯ ವಿದ್ಯಾಲಯ ಹಾಗೂ ಎಸ್.ಎಸ್. ಇನ್ಸ್ಟಿಟ್ಯೂಟ್ನಲ್ಲಿ 8 ವಿವಿಧ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯಾಗಾರಗಳು ನಡೆಯಲಿವೆ.
ಸಂಜೆ 4.30ಕ್ಕೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸಮ್ಮೇಳನ ಉದ್ಘಾಟಿಸಲಿದ್ದು, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಡಾ.ಬಿ.ಎಸ್. ಪ್ರಸಾದ್, ಡಾ. ಶುಕ್ಲಾ ಶೆಟ್ಟಿ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
23ರಂದು ಬೆಳಗ್ಗೆ 8 ರಿಂದ 5.30ರ ವರೆಗೆ ವಿಚಾರಗೋಷ್ಠಿಗಳು ನಡೆಯಲಿದ್ದು, ಸಂಜೆ 7.30ಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಅಧ್ಯಕ್ಷತೆಯಲ್ಲಿ 2ನೇ ದಿನದ ಸಮ್ಮೇಳನ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಡಾ.ಎನ್.ಕೆ. ಕಾಳಪ್ಪನವರ್, ಬಿ.ಎಸ್. ಪ್ರಸಾದ್, ಡಾ. ಶುಕ್ಲಾ ಶೆಟ್ಟಿ, ಡಾ. ಸಂಜೀವ ಸಿಂಗ್ ರಾವತ್ ಭಾಗವಹಿಸಲಿದ್ದಾರೆ.
ದಾವಣಗೆರೆ ಮಕ್ಕಳ ತಜ್ಞ ಡಾ.ಟಿ.ಎಸ್. ಸುರೇಶ್ ಬಾಬು ಅವರನ್ನು ಗೌರವಿಸಲಾಗುವುದು. ಡಾ. ವರಿಂದರ್ ಸಿಂಗ್ ಅವರು, ಮಕ್ಕಳ ಶ್ವಾಸಕೋಶದ ಕ್ಷೇತ್ರದಲ್ಲಿ ಮಾಡಿರುವ ಅಪಾರ ಕೊಡುಗೆಯನ್ನು ಪರಿಗಣಿಸಿ ಜೀವಮಾನ ಸಾಧನೆಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಸಮ್ಮೇಳನಕ್ಕೆ ದೇಶದೆಲ್ಲೆಡೆಯಿಂದ 500 ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ 120 ಸ್ನಾತಕೋತ್ತರ ವಿದ್ಯಾರ್ಥಿಗಳು ಪಾಲ್ಗೊಳ್ಳಲಿ ದ್ದಾರೆ ಎಂದು ಅವರು ಮಾಹಿತಿ ನೀಡಿದರು. 24ರಂದು ಬೆಳಗ್ಗೆ 9ರಿಂದ ಸಂಜೆ 3.30ರ ವರೆಗೆ ವಿವಿಧ ವಿಚಾರ ಗೋಷ್ಠಿಗಳು ನಡೆಯಲಿವೆ.
ಈ ವೇಳೆ ವೈದ್ಯರಾದ ಡಾ. ಮೂಗನಗೌಡ ಪಾಟೀಲ್, ಡಾ.ಬಿ.ಎಸ್ ಪ್ರಸಾದ್, ಡಾ.ಜಿ.ಗುರುಪ್ರಸಾದ್, ಡಾ.ಜಿ.ಎಸ್ ಲತಾ, ಡಾ.ಮಧು ಪೂಜಾರ್, ಡಾ.ವಿನಯ್ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.