ಜಗಳೂರು, ನ. 21 – ಕೆಎಸ್‌ಆರ್‌ಟಿಸಿ ಡಿಪೋ ಪ್ರಾರಂಭಿಸಲು ಒತ್ತಾಯಿಸಿ ಎಸ್ ಎಫ್‌ಐ ನೇತೃತ್ವದಲ್ಲಿ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಗ್ರೇಡ್ -2 ತಹಶೀಲ್ದಾರ್ ಮಂಜಾನಂದ, ಕೆಎಸ್‌ಆರ್‌ಟಿಸಿ ಡಿಎಂ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಗುರುವಾರ ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ನೂರಾರು ಸಂಖ್ಯೆಯ ವಿದ್ಯಾರ್ಥಿಗಳ ಪ್ರತಿಭಟನಾ ಮೆರವಣಿಗೆ ಅಧಿಕಾರಿಗಳ ವಿರುದ್ದ ಘೋಷಣೆ ಕೂಗುತ್ತಾ ಮಹಾತ್ಮಗಾಂಧಿ ವೃತ್ತದ ಮೂಲಕ ಅಂಬೇಡ್ಕರ್ ವೃತ್ತದ ಮೂಲಕ ತಾಲ್ಲೂಕು ಕಛೇರಿ ಮುಂಭಾಗ ಜಮಾಯಿಸಿ ಗಂಟೆಗೂ ಅಧಿಕ ಕಾಲ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಎಸ್‌ಎಫ್‌ಐ ರಾಜ್ಯ ಮುಖಂಡ ಅನಂತರಾಜ್ ಮಾತನಾಡಿ, ಕಳೆದ ದಶಕಗಳಿಂದ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಆರಂಭಕ್ಕೆ ನಿರಂತರ ಹೋರಾಟ ನಡೆಸಲಾಗಿತ್ತು. ಕಳೆದ ಅವಧಿಯ ಆಡಳಿತ ಸರ್ಕಾರಗಳು ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಪಟ್ಟಣದ ಹೊರ ಹೊಲಯದಲ್ಲಿ ಸರ್ವೆ ನಂ. 51/4 ರಲ್ಲಿ ಸರ್ಕಾರಿ ಜಮೀನಿನಲ್ಲಿ ಜಾಗವನ್ನು ಗುರುತಿಸಿ ಕಂದಾಯ ಇಲಾಖೆಯಿಂದ ಪಹಣಿ ಹಸ್ತಾಂತರಗೊಳಿಸಿ ಪ್ರಕ್ರಿಯೆ ನಡೆಸುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾವುದೇ ಕಾಮಗಾರಿಗೆ ಚಾಲನೆ ಸಿಗದೆ ದಿವ್ಯ ನಿರ್ಲಕ್ಷ್ಯ ವಹಿಸಿರುವುದು ಗ್ರಾಮೀಣ ವಿದ್ಯಾರ್ಥಿ ಸಮೂಹ ಸರ್ಕಾರಿ ಬಸ್ ಸೌಕರ್ಯದಿಂದ ವಂಚಿತವಾಗಿರುವುದು ಖಂಡನೀಯ ಎಂದರು. ತಾಲ್ಲೂಕಿನ ಅನೇಕ ಹಳ್ಳಿಗಳು ಸರ್ಕಾರಿ ಬಸ್ ಸಂಪರ್ಕವಿಲ್ಲದೆ ಪ್ರತಿ ನಿತ್ಯ ವಿದ್ಯಾರ್ಥಿಗಳು ಕಾಲೇಜುಗಳಿಗೆ ಸಕಾಲದಲ್ಲಿ ಆಗಮಿಸದೇ ಪಾಠ, ಪ್ರವಚನಗಳಿಗೆ ಅಡಚಣೆಯಾಗುತ್ತಿದೆ. ಕೂಡಲೇ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಕಳೆದ ವರ್ಷ ಸಲ್ಲಿಸಿದ ಮಾರ್ಗಗಳ ಅನ್ವಯ ತಾತ್ಕಾಲಿಕವಾಗಿ 5 ಬಸ್‌ಗಳನ್ನು ಗ್ರಾಮೀಣ ಸಾರಿಗೆಗೆ ಓಡಿಸಬೇಕು ಎಂದು ಮುಖಂಡ ಮಹಲಿಂಗಪ್ಪ ಒತ್ತಾಯಿಸಿದರು.
ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಮಾದಿಹಳ್ಳಿ ಮಂಜುನಾಥ್, ಡಿಎಸ್‌ಎಸ್ ಸಂಚಾಲಕ ಸತೀಶ್ ಮಲೆ ಮಾಚಿಕೆರೆ ಮಾತನಾಡಿ, ಶೀಘ್ರವಾಗಿ ಕೆಎಸ್‌ಆರ್‌ಟಿಸಿ ಡಿಪೋ ಆರಂಭಿಸಲು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ತಾಲ್ಲೂಕು ಅಧ್ಯಕ್ಷ ವಕೀಲ ತಮಲೇಹಳ್ಳಿ ಅಂಜಿನಪ್ಪ, ಮುಖಂಡ ವಕೀಲ ಆರ್. ಓಬಳೇಶ್, ಕುಮಾರ್, ಲೋಕೇಶ್, ಸತ್ಯಮೂರ್ತಿ, ಅಶೋಕ, ಕಾಟಪ್ಪ, ಸುನಿತಾ, ಚಿತ್ತಪ್ಪ, ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.