ಮಲೇಬೆನ್ನೂರಿನಲ್ಲಿ ಅಕ್ಷರ ತಾಯಿ ಲೂಸಿ ಸಾಲ್ಡಾನ
ಮಲೇಬೆನ್ನೂರು, ನ.21- ನಾವು ಮಾಡಿದ ಆಸ್ತಿಯನ್ನು ಅಪಹರಿಸಲು ಅನೇಕರು ಪ್ರಯತ್ನಿಸಬಹುದು. ಆದರೆ, ನಾವು ಗಳಿಸಿದ ವಿದ್ಯೆಯನ್ನು ಯಾರೂ ಅಪಹರಿಸಲು ಸಾಧ್ಯವಿಲ್ಲ ಎಂದು ಧಾರವಾಡದ ಅಕ್ಷರ ತಾಯಿ ಲೂಸಿ ಸಾಲ್ಡಾನ ಅಭಿಪ್ರಾಯಪಟ್ಟರು.
ದೊಗ್ಗಳ್ಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಕಲಿಕೆಯ ಪರಿಣಾಮಗಳು ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದ ಅವರು, ತಮ್ಮ ಅನುಭವದಲ್ಲಿ ವಿದ್ಯೆಯಿಂದ ಆದ ಉಪಯೋಗದ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಮಕ್ಕಳಿಗೆ ವಿದ್ಯಾದಾನ ನೀಡುವ ಜೊತೆಗೆ ಸರ್ಕಾರಿ ಶಾಲೆಗಳಿಗೆ ಲಕ್ಷಾಂತರ ರೂಪಾಯಿ ದತ್ತಿ ನೀಡುವ ಮೂಲಕ ಧಾರವಾಡ ಜಿಲ್ಲೆಯಲ್ಲಿ ಮನೆ ಮಾತಾಗಿರುವ ಲೂಸಿ ಸಾಲ್ಡಾನ ಅವರು ದೊಗ್ಗಳ್ಳಿ ಶಾಲೆಗೆ ದತ್ತಿ ನೀಡುವ ಯೋಜನೆ ಹೊಂದಿದ್ದು, ಆ ಮೂಲಕ ಹರಿಹರ ತಾಲ್ಲೂಕಿನಲ್ಲಿ ತಮ್ಮ ದತ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆಂದು ಎಂದು ಧಾರವಾಡ ಜಿಲ್ಲೆಯ ಶಿಕ್ಷಕ ಲಕ್ಕಮ್ಮನವರ್ ತಿಳಿಸಿದರು.
ಮುಖ್ಯೋಪಾಧ್ಯಾಯ ಹೆಚ್.ಮಲ್ಲಿಕಾರ್ಜುನಪ್ಪ ಅಧ್ಯಕ್ಷತೆ ವಹಿಸಿದ್ದರು.
ಧಾರವಾಡದ ಸಮಾಜಸೇವಕ ಮಲ್ಲಪ್ಪ, ಶಾಲೆಯ ಶಿಕ್ಷಕರಾದ ಹೆಚ್.ಚಂದ್ರಪ್ಪ, ಸುಶೀಲಮ್ಮ, ಸಬಿಯಾ ಪರ್ವಿನ್, ನಾಗರತ್ನಮ್ಮ, ಶರತ್ ಬಾಬು, ಶಿಲ್ಪಾ, ಪುಷ್ಪಾವತಿ, ಅಡುಗೆ ಸಿಬ್ಬಂಧಿಗಳಾದ ಜ್ಯೋತಿ, ನೇತ್ರಾವತಿ, ಮಂಜಮ್ಮ, ಆಯಾ ನಾಗಮ್ಮ ಸೇರಿದಂತೆ ಅನೇಕರು ಈ ವೇಳೆ ಹಾಜರಿದ್ದರು.