ದಾವಣಗೆರೆ, ನ. 20 – ಕರ್ನಾಟಕ ರಾಜ್ಯ ಎಸ್ಸಿ – ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ವತಿಯಿಂದ 2024ನೇ ಸಾಲಿನ ಪ್ರತಿಷ್ಠಿತ ರಾಜ್ಯ ಮಟ್ಟದ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ನಗರದ ಶಿವಮೊಗ್ಗ ಮಲ್ನಾಡವಾಣಿ ಸಂಪಾದಕ ಕೆ. ಏಕಾಂತಪ್ಪ ಅವರಿಗೆ ವಿಶೇಷ ಪ್ರಶಸ್ತಿ ಲಭಿಸಿದೆ.
ರಾಜ್ಯ ಮಟ್ಟದ ದತ್ತಿ ಪ್ರಶಸ್ತಿ ತಲಾ ಹತ್ತು ಸಾವಿರ ರೂ. ನಗದು, ಪ್ರಶಸ್ತಿ ಫಲಕಗಳನ್ನೊಳಗೊಂಡಿದೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ದತ್ತಿ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಜಿ.ಎನ್. ಮೋಹನ್, ಬಿ. ರಾಚಯ್ಯ ದತ್ತಿ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಬಿ.ಎಂ ಹನೀಫ್, ಪ್ರೊ.ಬಿ. ಕೃಷ್ಣಪ್ಪ ದತ್ತಿ ಡಿಎಸ್ಎಸ್ (ಪ್ರೊ. ಕೃಷ್ಣಪ್ಪ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಮತ್ತು ಬಿ. ಬಸವಲಿಂಗಪ್ಪ ದತ್ತಿ ಪ್ರಶಸ್ತಿಯು ಪತ್ರಕರ್ತೆ ಮಂಜುಳಾ ಹುಲಿಕುಂಟೆ ಅವರಿಗೆ ಲಭಿಸಿದೆ.
ಸಂಪಾದಕರಿಗೆ ನೀಡುವ ಸಂಘದ ವಿಶೇಷ ಪ್ರಶಸ್ತಿಯು ತಲಾ 5 ಸಾವಿರ ರೂ., ಪ್ರಶಸ್ತಿ ಫಲಕಗಳನ್ನೊಳಗೊಂಡಿದೆ. ಮಂಡ್ಯದ ಜನೋದಯ ಮಂಜುಳಾ ಕಿರುಗಾವಲು, ದಾವಣಗೆರೆಯ ಶಿವಮೊಗ್ಗ ಮಲ್ನಾಡ ವಾಣಿ ಸಂಪಾದಕ ಕೆ. ಏಕಾಂತಪ್ಪ, ತುಮಕೂರು ವಿಶಾಲ ವಾರ್ತೆ ಸೊಗಡು ವೆಂಕಟೇಶ್, ಹೈದ್ರಾಬಾದ್ ಕರ್ನಾಟಕ ಮುಂಜಾವು ಪತ್ರಿಕೆಯ ಗುಲ್ಬರ್ಗದ ಸುರೇಶ್ ಸಿಂಧ್ಯೆ ಅವರಿಗೆ ಲಭಿಸಿದೆ.
ಇದೇ ದಿನಾಂಕ 29ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡುವರು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು ತಿಳಿಸಿದ್ದಾರೆ.