ದಾವಣಗೆರೆ, ನ.20- ಬೆಳಗಾವಿಯಲ್ಲಿ ಬರುವ 9ರಂದು ಚಳಿಗಾಲದ ಅಧಿವೇಶನ ನಡೆಯಲಿದ್ದು, ಈ ವೇಳೆ ರೈತರಿಗೆ ಮಾರಕವಾಗಿರುವ 3 ಕೃಷಿ ಕಾಯ್ದೆಗಳನ್ನು ಸರ್ಕಾರ ರದ್ದು ಮಾಡಬೇಕು ಎಂದು ರಾಜ್ಯಾಧ್ಯಕ್ಷ ಡಾ.ವಾಸುದೇವ ಮೇಟಿ ಆಗ್ರಹಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರ ಬೆಳೆಗಳಿಗೆ ಕಾನೂನಾತ್ಮಕ ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ಬಗರ್ ಹುಕ್ಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವ ಕುರಿತು ಸಾಕಷ್ಟು ಹೋರಾಟ ನಡೆಸಿದ್ದರೂ, ಇದುವರೆಗೆ ಒಂದು ಚೀಟಿ ನೀಡಲು ಸಾಧ್ಯವಾಗಿಲ್ಲ. ತಕ್ಷಣ ಜಿಲ್ಲಾಧಿಕಾರಿಗಳ ಸಭೆ ಕರೆದು ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳುವಂತೆ ಸೂಚಿಸಬೇಕು. ಒಂದು ವೇಳೆ ಸರ್ಕಾರ ಹಕ್ಕುಪತ್ರ ನೀಡದಿದ್ದರೆ ಕಂದಾಯ ಸಚಿವರು ಯಾವ ಜಿಲ್ಲೆಗೆ ತೆರಳಿದರೂ ಅವರಿಗೆ ಕಪ್ಪು ಪಟ್ಟಿ ತೋರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ರೈತರ ಜಮೀನುಗಳನ್ನು ವಕ್ಫ್ ಹೆಸರಿನಲ್ಲಿ ಕಬಳಿಸುವ ಹುನ್ನಾರ ನಡೆಯುತ್ತಿದೆ. ಜಮೀನುಗಳು, ಶಾಲಾ ಆಸ್ತಿಗಳು, ದೇವಸ್ಥಾನಗಳ ಆಸ್ತಿಗಳಲ್ಲೂ ವಕ್ಫ್ ಹೆಸರು ನಮೂದಾಗಿದೆ.
ಬಿಜಾಪುರ ಜಿಲ್ಲೆಯೊಂದರಲ್ಲಿಯೇ 1122 ಎಕರೆ ಪ್ರದೇಶ, ಮುದ್ದೆ ಬಿಹಾಳದಲ್ಲಿ 192 ಎಕರೆ ಜಮೀನು ವಕ್ಫ್‌ಗೆ ಎಂದು ಹೇಳಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು ವಕ್ಫ್ ನೀಡಿದ ನೋಟೀಸ್ ವಾಪಾಸ್ ಪಡೆಯುತ್ತೇವೆ ಎಂದು ಹೇಳಿದ್ದರೂ, ಸಚಿವ ಜಮೀರ್ ಅಹ್ಮದ್ ವೈತಿರಿಕ್ತವಾಗಿ ಹೇಳಿಕೆ ನೀಡುತ್ತಾ, ಆತಂಕ ಸೃಷ್ಟಿಸುತ್ತಿದ್ದಾರೆ. ಕೂಡಲೇ ಜಮೀರ್ ಅಹ್ಮದ್ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಗಳನ್ನು ಆರಂಭಿಸಬೇಕು. ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆ ಮಾಡಬೇಕು. ಆಲಮಟ್ಟಿ ಜಲಾಶಯವನ್ನು ಎತ್ತರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ, ರತ್ನ ಬಿ.ಗೋದಿ, ಶಾರದಾ ಕಾಳಜ್ಜನವರ್, ಉಪಾಧ್ಯಕ್ಷ ಅನಿಲ್ ಸಂಘ್, ಕಾರ್ಯದರ್ಶಿ ಫೀರು ಕರೂರು, ಕಂಟೆಪ್ಪಗೌಡ, ಅನ್ನಪೂರ್ಣ ಪಾಟೀಲ್, ಚನ್ನವೀರಮ್ಮ ಬಳ್ಳಾರಿ ಇತರರು ಉಪಸ್ಥಿತರಿದ್ದರು. ದಾವಣಗೆರೆ ಜಿಲ್ಲಾ ಧ್ಯಕ್ಷ ಬಸವರಾಜ್ ಗುಮ್ಮನೂರು ಸ್ವಾಗತಿಸಿದರು.