ರಾಜ್ಯ ರೈತ ಸಂಘದ ರಾಜ್ಯ ಸಮಿತಿ ಸಭೆಯಲ್ಲಿ ಬಸವಪ್ರಭು ಶ್ರೀ ಕಿವಿಮಾತು
ದಾವಣಗೆರೆ, ನ.20- ರೈತರು ಜೇನು ಹುಳುವಿನಂತೆ ಒಟ್ಟಾಗಿರಬೇಕು ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಕಿವಿ ಮಾತು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ)ವತಿಯಿಂದ ನಗರದ ಎಪಿಎಂಸಿ ಪ್ರಾಂಗಣದಲ್ಲಿ ಇಂದು ಹಮ್ಮಿಕೊಳ್ಳಲಾ ಗಿದ್ದ ರಾಜ್ಯ ಸಮಿತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಜೇನು ಗೂಡಿಗೆ ಕಲ್ಲೆಸದರೆ ಎಲ್ಲಾ ಜೇನುಗಳೂ ಸೇರಿ ಮುತ್ತಿಗೆ ಹಾಕುತ್ತವೆ. ಹಾಗೆಯೇ ರೈತರಿಗೆ ಸೂಕ್ತ ನ್ಯಾಯ ಸಿಗಬೇಕಾದರೆ ಪಕ್ಷ ಭೇದ ಮರೆತು ಒಂದಾಗಿ ಹೋರಾಡಬೇಕು. ಆಗ ಮಾತ್ರ ನ್ಯಾಯ ಪಡೆಯಲು ಸಾಧ್ಯವಿದೆ ಎಂದು ಹೇಳಿದರು.
ಪ್ರಸ್ತುತ ದಿನಗಳಲ್ಲಿ ಸಂಘಟನೆಗಳು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ. ಸಂಘಟನೆಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ನಾಯಕರೂ ಇಲ್ಲವಾಗಿದೆ. ನಿಸ್ವಾರ್ಥ, ಪ್ರಾಮಾಣಿಕರಾಗಿರುವ ಹಾಗೂ ಸಮಸ್ಯೆಗಳಿಗಾಗಿ ಹೋರಾಡುವಂತಹ ನಾಯಕರ ಅಗತ್ಯವಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ರೈತ ಸಂಘಟನೆ ಗಳೊಂದಿಗೆ ರಾಜಕಾರಣವೂ ಸೇರಿಕೊಂಡಿದೆ. ಸಂಘಟನೆಗಳ ಮುಖಂಡರು ಪಕ್ಷದೊಂದಗೆ ಗುರುತಿಸಿಕೊಳ್ಳುತ್ತಿದ್ದಾರೆ. ಯಾವುದಾದರೂ ಸಮಸ್ಯೆಗೆ ಹೋರಾಟ ಆರಂಭವಾದ ಕೂಡಲೇ ರಾಜಕರಾಣಿಗಳು ಒಂದಿಷ್ಟು ಹಣ ನೀಡಿದರೆ ಆ ಹೋರಾಟವೇ ಸತ್ತುಹೋಗುತ್ತದೆ. ಆಮಿಷಕ್ಕೆ ಬಲಿಯಾಗದಿದ್ದರೆ ಮಾತ್ರ ಹೋರಾಟಕ್ಕೆ ಯಶಸ್ಸು ಸಿಗುತ್ತದೆ ಎಂದರು.
ರೈತರು ದೇಶದ ಬೆನ್ನೆಲುಬು ಎನ್ನಲಾಗುತ್ತದೆ. ಆದರೆ ಅಂತಹ ಬೆನ್ನೆಲುಬನ್ನೇ ಮುರಿಯುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ರೈತ ಉಳಿದರೆ ಮಾತ್ರ ಜಗತ್ತು ಉಳಿಯುತ್ತದೆ. ಇಂದು ದೇಶದ ಜನತೆ ಮೂರು ಹೊತ್ತಿನ ಊಟವನ್ನು ಮಾಡುತ್ತಿದೆ ಎಂದರೆ ಅದಕ್ಕೆ ಕಾರಣ ರೈತರ ಶ್ರಮ ಎಂದರು.
ನಾಲ್ವತ್ತು ವರ್ಷಗಳ ಹಿಂದೆ ಜನರು ಗಂಜಿ, ಅಂಬ್ಲಿ ಕುಡಿದು ಜೀವನ ಸಾಗಿಸುತ್ತಿದ್ದರು. ಆದರೆ ಇಂದು ಎಲ್ಲರಿಗೂ ಅನ್ನ ಸಿಗುತ್ತಿದೆ. ಇದಕ್ಕೆ ಕಾರಣ ರೈತ. ಸರ್ಕಾರ ಅನ್ನ ಭಾಗ್ಯ ಯೋಜನೆಯನ್ನೂ ಜಾರಿಗೆ ತಂದಿದೆ. ಅದಕ್ಕೂ ರೈತರ ಸಹಕಾರವೇ ಮುಖ್ಯ ಎಂದರು.
ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ರೈತರ ಪಾಲನ್ನು ಮಧ್ಯವರ್ತಿಗಳು ತಿನ್ನುತ್ತಿರುವುದು ದುರಂತ. ರೈತರ ಬೆಳೆಗೆ ರೈತರೇ ಬೆಲೆ ನಿಗದಿ ಪಡಿಸುವಂತೆ ಕಾಯ್ದೆ ರೂಪಿಸಬೇಕು. ಆಗ ಮಾತ್ರ ರೈತರು ಉದ್ಧಾರವಾಗಲು ಸಾಧ್ಯವಾಗುತ್ತದೆ ಎಂದರು.