ರಾಣೇಬೆನ್ನೂರು, ನ. 20 – ಕ್ಷಯರೋಗವು ಒಂದು ಸೋಂಕು ರೋಗವಾಗಿದ್ದು, ಸಾರ್ವಜನಿಕರು ಆರೋಗ್ಯದ ಕಡೆಗೆ ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಜೇಶ್ವರಿ ಕದರ ಮಂಡಲಗಿ ಹೇಳಿದರು.
ಇಲ್ಲಿನ ರಂಗನಾಥ ನಗರದ ಕುಂಬಾರ ಓಣಿಯಲ್ಲಿ ಈಚೆಗೆ ಸಕ್ರಿಯ ಕ್ಷಯರೋಗ ಪತ್ತೆ ಹಚ್ಚುವ ಮತ್ತು ಚಿಕಿತ್ಸೆ ನೀಡುವ ಆಂದೋಲನ ಕಾರ್ಯಕ್ರಮದಲ್ಲಿ ಕುಂಬಾರ ವೃತ್ತಿಯಲ್ಲಿ ಕೆಲಸ ಮಾಡುತ್ತಿರುವ ಕುಟುಂಬದ ಸದಸ್ಯರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೆಮ್ಮುವುದು ಹಾಗೂ ಸೀನುವುದರಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಇದು ಹೆಚ್ಚಾಗಿ ದುರ್ಬಲ ವರ್ಗದ ಜನರಿಗೆ ಕ್ಷಯ ರೋಗದ ಸೋಂಕು ತಗಲಿ, ಬೇಗ ಕಾಯಿಲೆಯಾಗುವ ಸಂಭವವಿರುತ್ತದೆ. ಸರ್ಕಾರವು ಈ ದೃಷ್ಟಿಯಲ್ಲಿ ಕುಂಬಾರ ವೃತ್ತಿಯಲ್ಲಿ ಸಾಕಷ್ಟು ಮಣ್ಣು ಮತ್ತು ಹೊಗೆಯ ವಾತಾವರಣದಲ್ಲಿ ಕಾರ್ಯ ನಿರ್ವಹಿಸುವುದರಿಂದ ಸೋಂಕು ಬೇಗ ತಗಲುತ್ತದೆ. ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಕಫ ಪರೀಕ್ಷೆ ಮತ್ತು ಉಚಿತ ಚಿಕಿತ್ಸೆಯನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಜಗದೀಶ್ ಪಾಟೀಲ ಹಾಗೂ ನಗರ ಕ್ಷಯರೋಗ ಆರೋಗ್ಯ ಸಂದರ್ಶಕ ಗಿರೀಶ ಮುರನಾಳ ಅವರು ಕ್ಷಯರೋಗದ ಕುರಿತು ಮಾಹಿತಿ ನೀಡುವುದರ ಜೊತೆಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ತಿಳಿಸಿದರು.
ಅಭಿನವ ಸೊಪ್ಪಿನ, ನಾಗರಾಜ ಕುಡುಪಲಿ, ಶೋಭಾ ಬಸೇನಾಯ್ಕರ್, ವಿಜಯ ಉಪ್ಪಾರ, ಮಂಜುಳಾ ನಾಯಕ ಇದ್ದರು.