ಉಜ್ವಲ ಭವಿಷ್ಯಕ್ಕೆ ಕಠಿಣ ಶ್ರಮದ ಓದು ಮುಖ್ಯ: ರೇಣುಕಾ

ಉಜ್ವಲ ಭವಿಷ್ಯಕ್ಕೆ ಕಠಿಣ ಶ್ರಮದ ಓದು ಮುಖ್ಯ: ರೇಣುಕಾ

ದಾವಣಗೆರೆ, ನ.19- ಮುಂದಿನ ದಿನಗಳಲ್ಲಿ ಸರ್ಕಾರಿ ಅಧಿಕಾರಿಯಾಗಿಯೋ ಅಥವಾ ಉತ್ತಮ ಸಂಸ್ಥೆಯಲ್ಲಿ ಕೆಲಸ ಮಾಡಬೇಕಾದರೆ ಇಂದು ಕಠಿಣ ಪರಿಶ್ರಮದಿಂದ ಓದುವುದು ಅಗತ್ಯ ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸಂಜೆ ಕಾಲೇಜುಗಳ 2024-25ನೇ  ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್‌, ಎನ್‌ಸಿಸಿ, ಯುವ ರೆಡ್ ಕ್ರಾಸ್, ಸ್ಕೌಟ್ಸ್ ಹಾಗೂ ಗೈಡ್ಸ್‌ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನೀವು ಕಠಿಣ ಪರಿಶ್ರಮದಿಂದ ನಿಮ್ಮದಾಗಿಸಿಕೊಂಡ ವಿದ್ಯೆ ನಿಮ್ಮನ್ನು ಯಾವತ್ತೂ ಕೈ ಬಿಡುವುದಿಲ್ಲ. ಅಮೂಲ್ಯವಾದ ಪದವಿ ದಿನಗಳನ್ನು ಸದ್ಭಳಕೆ ಮಾಡಿಕೊಳ್ಳಿ. ಉತ್ತಮ ನೌಕರಿ ಪಡೆದರೆ ನಿಮ್ಮ ಸಂಬಂಧಿಗಳು, ಸ್ನೇಹಿತರು ನಿಮ್ಮನ್ನು ನೋಡುವ ರೀತಿಯೇ ಬೇರೆಯಾಗಿರುತ್ತದೆ ಎಂದರು.

ಉಪನ್ಯಾಸಕರು ಹೇಳಿದ್ದನ್ನು ಸರಿಯಾಗಿ ಅರ್ಥೈಸಿಕೊಳ್ಳಿ. ಆದಷ್ಟೂ ಬೆಳಗಿನ ವೇಳೆ ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅದು ನೆನಪಿನಲ್ಲಿ ಉಳಿಯುತ್ತದೆ. ಕಾಲೇಜು ಅಭ್ಯಾಸದ ಬಗ್ಗೆ ಮನೆಯಲ್ಲೂ ಮನನ ಮಾಡಿಕೊಳ್ಳಿ. ಉತ್ತಮ ಅಂಕ ಪಡೆದು ನಿಮ್ಮನ್ನು ಹೆತ್ತವರಿಗೂ, ಕಾಲೇಜಿಗೂ ಕೀರ್ತಿ ತನ್ನಿ ಎಂದು ಆಶಿಸಿದರು.

ಮಹಾನಗರ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಮಾತನಾಡಿ, ಜೀವನದಲ್ಲಿ ಯಶಸ್ಸು ಸಿಗಬೇಕಾದರೆ  ಶಿಸ್ತು ಮುಖ್ಯ ಎಂದು ಕಿವಿ ಮಾತು ಹೇಳಿದರು.  ನಿಮ್ಮ ಇಚ್ಛೆಗಳನ್ನು ಬಿಟ್ಟು ವಿದ್ಯಾಭ್ಯಾಸಕ್ಕೆ ಹೆಚ್ಚು ಗಮನ ಕೊಡಿ. ಉತ್ತಮ ಹವ್ಯಾಸ ರೂಢಿಸಿಕೊಳ್ಳಿ. ಈ ಮೂರ್ನಾಲ್ಕು ವರ್ಷ ಶ್ರಮ ಪಟ್ಟರೆ ಜೀವನದ ಮುಂದಿನ ಎಲ್ಲಾ ದಿನಗಳನ್ನೂ ಸುಖವಾಗಿ ಕಳೆಯಬಹುದು ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ಬಿ. ತಹಶೀಲ್ದಾರ್ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಪ್ರಾಂಶುಪಾಲ ಡಾ.ಹೆಚ್.ವಿ. ವಾಮದೇವಪ್ಪ, ಸರ್ಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜು ಪ್ರಾಂಶುಪಾಲರಾದ ರುದ್ರಪ್ಪ, ಐಸಿಎಕ್ಯೂ ಸಂಚಾಲಕ ಗುರುರಾಜ್, ಕಾಲೇಜು ಅಧೀಕ್ಷಕರಾದ ಪ್ರತಿಭಾ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರುಗಳಾದ ಎನ್.ಎಂ. ಬಸವರಾಜಯ್ಯ, ಬಸವರಾಜಪ್ಪ ಹೆಚ್., ವಿ.ಎ. ಅಂಗಡಿ, ಸಾಂಸ್ಕೃತಿಕ ವಿಭಾಗದ ಸಂಚಾಲಕರಾದ ಪ್ರೊ.ನರೇಶ್ ಇತರರಿದ್ದರು.

error: Content is protected !!