ಕಾರ್ತಿಕ ಗೌರಿ ಆರತಿಯ ಹಾಡುಗಳಲ್ಲಿ ತುಂಬಾ ಸ್ವಾರಸ್ಯಕರ ವಾದ ಹಾಡು ಎಂದರೆ ಇದು. ಕೇವಲ ಎಂಟು ದಿನಗಳಷ್ಟೇ ತವರು ಮನೆಯಲ್ಲಿ ಇರುತ್ತೇನೆಂದು ಆಶ್ವಯುಜ ಶೀಗಿ ಹುಣ್ಣಿಮೆಗೆ ಬಂದ ಗೌರಿಯು ಕಾರ್ತಿಕ ಹುಣ್ಣಿಮೆಯಾದರೂ ಕೈಲಾಸಕ್ಕೆ ವಾಪಸ್ ಬಾರದಿದ್ದುದನ್ನು ಕಂಡು ಸಾಕ್ಷಾತ್ ಶಿವನೇ ಆಕೆಯನ್ನು ಕರೆಯಲು ಬಂದಾಗ ಗೌರಿಯು ತಾನು ಬರುವುದಿಲ್ಲ ಎಂಬುದಕ್ಕೆ ಕಾರಣವನ್ನು ಕೊಡುತ್ತಾಳೆ !!. ರಾಗಿ ರೊಟ್ಟಿ ರಾಜಗಿರಿ ಸೊಪ್ಪಿನ ಪಲ್ಯವನ್ನು ಕೊಟ್ಟರೆ, ಸಜ್ಜೆ ರೊಟ್ಟಿ ಹಾಕರಕಿ ಸೊಪ್ಪಿನ ಪಲ್ಯವನ್ನು ಕೊಟ್ಟರೆ ನಮ್ಮ ತವರವರನ್ನು ಬಡವರು ಎಂದು ದೂರಿದಿ.
ಸಣ್ಣ ಶಾವಿಗೆ ಬಸೆದು ನಾನು ನೀಡಿದರೆ ಸವತಿ ಗಂಗೆಯನ್ನು ಕರೆದು ಸಕ್ಕರೆ ಕೇಳಿದಿ. ಹೂರಣದ ಕರಿಗಡಬು ನಾನು ನೀಡಿದರೆ ಗಂಗೆಯನ್ನು ಕರೆದು ತುಪ್ಪ ಕೇಳಿದಿ. ನಾನು ಮಂಚ ಹಾಸಿದರೆ ಗಂಗೆಯ ಕೂಡ ಮಂಚಕ್ಕೆ ಏರಿದಿ ಎಂದೆಲ್ಲ ಗೌರಿ ದೂರಿದಾಗ ಶಿವನು ತಪ್ಪಾಯ್ತು, ನನ್ನ ಅರ್ಧಾಂಗಿ ನೀನು, ಎದ್ದು ಬಾ ಎಂದು ಗೋಗರೆಯುವ ಗೌರಿ ಆರತಿಯ ಈ ಹಾಡು ಅತ್ಯಂತ ಸ್ವಾರಸ್ಯಕರವಾಗಿದೆ.
ದಾವಣಗೆರೆ ಹಳೆ ಊರಿನ ಗೌರಿ ಆರತಿಯ ಸ್ವಾರಸ್ಯಗಳು…
`ಶಿವನೂ ಗೌರಿಯ ಕರೆಯಲು ಬಂದು ಸರ್ವರೇನಂದಾರಾ.. ಸರ್ವರೇನಂದಾರಾ, ಎಂಟ ದಿನ ಇದ್ದು ಬರತೇನಂದ ಇಲ್ಲೇ ಕುಂತೆಲ್ಲ, ಎದ್ದು ಬಾರ.. ಎದ್ದು ಬಾರ.. ನಿನ ಕರೆಯಲು ಬಂದೆ, ಯಾಹೊತ್ತ ಆತಲ್ಲ. ರಾಗಿಯ ರೊಟ್ಟಿ ರಾಜಗಿರಿ ಪಲ್ಲೇವ, ಈ ರಾಜ್ಯಕ್ಕೆ ನಮ್ಮವರು ಬಡವರಂದೆಲ್ಲ, ವಲ್ಹೋಗ ವಲ್ಲೇನ್ ಹೋಗ ನಾ ಬರುವುದಿಲ್ಲ ವಲ್ಲೇನ್ ಹೋಗ ನಾ ಬರುವುದಿಲ್ಲ. ಸಜ್ಜೆಯ ರೊಟ್ಟಿ ಹಾಕರಕಿ ಪಲ್ಲೇವು, ಈ ದಿಕ್ಕಿಗೆ ನಮ್ಮವರು ಬಡವರಂದೆಲ್ಲ, ವಲ್ಹೋಗ ವಲ್ಲೇನ್ ಹೋಗ ನಾ ಬರುವುದಿಲ್ಲ, ವಲ್ಲೇನ್ಹೋಗ ನಾ ಬರುವುದಿಲ್ಲ. ಸಣ್ಣನ ಶಾವಿಗಿ ಬಸ ಬಸದ ನೀಡಿ ದರ, ಬಸ ಬಸದ ನೀಡಿದರ ಆ ಸಣ್ಣ ಸಿರಿಗಂಗಿ ಕರೆದು ಸಕ್ಕರಿ ಕೇಳಿದ್ದಿ, ವಲ್ಹೋಗ ವಲ್ಲೇನ್ ಹೋಗ ನಾ ಬರುವುದಿಲ್ಲ, ನಾ ಬರುವುದಿಲ್ಲ. ಹೂರಣದ ಕರಿಗಡಬ ಕರ ಕರದು ನೀಡಿದರ ಕರ ಕರದು ನೀಡಿದರ ಆ ಸಣ್ಣ ಸಿರಿಗಂಗಿ ಕರೆದು ತುಪ್ಪ ಬೇಕಂದಿ, ವಲ್ಹೋಗ ವಲ್ಲೇನ ಹೋಗ ನಾ ಬರುವುದಿಲ್ಲ ನಾ ಬರುವುದಿಲ್ಲ. ಮಂಚಾವ ಹಾಸಿದ್ದೆ ಮಲ್ಲೀಗಿ ಸೊಸಿದ್ದೆ, ಆ ಸಣ್ಣ ಸಿರಿಗಂಗಿ ಕರೆದು ಮಂಚಕ್ಕೇರಿದ್ದಿ. ವಲ್ಹೋಗ ವಲ್ಲೇನ ಹೋಗ ನಾ ಬರುವುದಿಲ್ಲ ನಾ ಬರುವುದಿಲ್ಲ. ಅಂದಿದ್ದೆಲ್ಲಾ ಸರ್ವತಪ್ಪು ಆಡಿದ್ದೆಲ್ಲ ಸರ್ವತಪ್ಪು ನನ ಅರ್ಧ ಭಾಗ ನೀನ ಅಂದೆ, ಎದ್ದು ಬಾ ಅಂದೇನಲ್ಲ ಎದ್ದು ಬಾರ ಎದ್ದು ಬಾರ ನಿನ್ನ ಕರೆಯಲು ಬಂದೆ ಯಾಹೊತ್ತಾತಲ್ಲ……’
– ಹೆಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತ