ದಾವಣಗೆರೆ, ನ.17- ಸಕ್ಕರೆ ನಾಡು ಮಂಡ್ಯದಲ್ಲಿ ಬರುವ ಡಿಸೆಂಬರ್ 20, 21 ಮತ್ತು 22 ರಂದು ಜರುಗುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 2024-25 ಸಮ್ಮೇಳನದ ಆನ್ ಲೈನ್ ನೋಂದಣಿಗೆ ಚಾಲನೆ ನೀಡಲಾಗಿದೆ.
ಈ ಬಾರಿ ವಿನೂತನವಾಗಿ ಸಮ್ಮೇ ಳನದ ನೋಂದಣಿಯನ್ನು ಆನ್ ಲೈನ್ ಮೂಲಕ ಮಾಡಲಾಗುತ್ತಿದ್ದು, ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಕೆ.ಆರ್.ಎಸ್. ನ ರಾಯಲ್ ಆರ್ಕಿಡ್ನಲ್ಲಿ ಇಂದು ಚಾಲನೆ ನೀಡಿ ದರು. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿನಿಧಿ ಯಾಗಿ ಭಾಗವಹಿಸಲು ನೋಂದಣಿಗೆ 600 ರೂ.ಗಳ ಶುಲ್ಕ ನಿಗದಿ ಮಾಡಲಾಗಿರುತ್ತದೆ.
ಕನ್ನಡ ಸಾಹಿತ್ಯ ಪರಿಷತ್ತಿನ ವೆಬ್ಸೈಟ್ ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದಿರುವವರು ನೊಂದಣಿ ಮಾಡಿಕೊಳ್ಳಲು ಇಂದಿನಿಂದ 20 ದಿನಗಳ ಕಾಲ ಅವಕಾಶ ನೀಡಲಾಗಿದೆ. ಆನ್ಲೈನ್ನಲ್ಲಿ ಅರ್ಜಿ ಭರ್ತಿ ಮಾಡಿದ ನಂತರ ಹಣ ಪಾವತಿ ಕೂಡ ಆನ್ಲೈನ್ ಮೂಲಕ ಮಾಡಬೇಕಿರುತ್ತದೆ.
ಜಿಲ್ಲಾಧಿಕಾರಿ ಡಾ. ಕುಮಾರ ಮಾತನಾಡಿ, ನೋಂದಣಿಯಾಗುವವರಿಗೆ ಆನ್ಲೈನ್ ಮೂಲಕ ವಸತಿ ಒದಗಿಸುವ ಸ್ಥಳ, ವಿಳಾಸ, ನೋಡಲ್ ಅಧಿಕಾರಿಗಳ ಮೊಬೈಲ್ ಸಂಖ್ಯೆ, ಹಾಗೂ ಆನ್ಲೈನ್ನಲ್ಲೇ ಫೋಟೋ ಸಹಿತ ಗುರುತಿನ ಚೀಟಿ ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.
ಆನ್ಲೈನ್ ನೋಂದಣಿಗೆ https://kannadasahithyaparishattu.in/sammelana2024/registration ಈ ಲಿಂಕನ್ನು ಬಳಸಬಹುದು.